ಬೆಂಗಳೂರು: ಸಿಎಂ ಬೊಮ್ಮಾಯಿಯವರೇ ಕೇವಲ ಆಶ್ವಾಸನೆ ಕೊಡುವ ಮುಖ್ಯಮಂತ್ರಿಗಳು ನೀವಾಗಬಾರದು ಎಂದು ಕಾಗಿನೆಲೆ ಶ್ರೀ ಹೇಳಿದರು.
ಬೆಂಗಳೂರಿನ ಗರುಡಾಚಾರ್ ಪಾಳ್ಯದಲ್ಲಿ ಸಚಿವ ಎಂಟಿಬಿ ನಾಗರಾಜ್ ನಿರ್ಮಾಣ ಮಾಡಿರುವ ಶ್ರೀ ಮಂಜುನಾಥ ಸ್ವಾಮಿ ದೇವಾಲಯದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಬೆಂಗಳೂರಲ್ಲಿ ಮಳೆ ಬಂದಾಗ ಸಮಸ್ಯೆ ಪರಿಹರಿಸಲ್ಲ ಮಳೆ ಸಮಯದಲ್ಲಿ ಜನಪ್ರತಿನಿಧಿಗಳು, ಬಿಬಿಎಂಪಿಯವರು ಆ ಸಮಯಕ್ಕೆ ಬರೀ ಆಶ್ವಾಸನೆ ನೀಡಿ ಹೋಗುತ್ತಾರೆ. ಇದಕ್ಕೆ ಶಾಶ್ವತ ಪರಿಹಾರವೇ ಇಲ್ಲ ಎಂದರು.
ಶ್ರೀಗಳ ಪಕ್ಕದಲ್ಲೇ ಕುಳಿತಿದ್ದ ಸಿಎಂ ಬೊಮ್ಮಾಯಿ, ಈ ಹೇಳಿಕೆಯಿಂದ ಅಸಮಾಧಾನಗೊಂಡು ಸ್ವಾಮೀಜಿ ಕೈಯಿಂದ ಮೈಕ್ ತೆಗೆದುಕೊಂಡು ಸ್ಪಷ್ಟನೆ ನೀಡಿದರು.
ನಾನು ಯಾವುದೇ ಟೊಳ್ಳು ಭರವಸೆ ನೀಡಿಲ್ಲ. ಈಗಾಗಲೇ ನಮ್ಮ ಯೋಜನೆಯಂತೆ ಕೆಲಸ ಪ್ರಾರಂಭವಾಗಿದೆ. ಒತ್ತುವರಿ ತೆರವು ಮಾಡಿ ರಾಜಕಾಲುವೆಗಳ ಕೆಲಸ ಮಾಡುತ್ತೇವೆ. ಅದಕ್ಕೆ ಬೇಕಾದ ಎಲ್ಲಾ ಅನುದಾನ ಸರ್ಕಾರದಿಂದಲೇ ಕೊಡಲಾಗಿದೆ. ನಾನು ಸುಳ್ಳು ಭರವಸೆ ನೀಡುವ ಮುಖ್ಯಮಂತ್ರಿಯಲ್ಲ. ಯಾವುದಾದರೂ ಕೆಲಸ ಮಾಡ್ತೀನಿ ಅಂದ್ರೆ ಮಾಡೇ ಮಾಡ್ತೀನಿ ಎಂದು ಖಡಕ್ ಪ್ರತ್ಯುತ್ತರ ಕೊಟ್ಟರು.
ನಮ್ಮ ದೇಶದ ಇತಿಹಾಸ, ಪರಂಪರೆ ತಿಳಿದುಕೊಂಡಾಗ ನಾವು ಯಾರು ಎಂದು ತಿಳಿಯುತ್ತದೆ. ಈ ದೇಶಕ್ಕಾಗಿ ಹಾಗೂ ಸ್ವಂತಕ್ಕಾಗಿ ನಾನು ಏನು ಮಾಡಬಲ್ಲೆ ಎನ್ನುವುದನ್ನು ತಿಳಿಯಬೇಕು. ಯಾಕೆಂದರೆ ಪ್ರತಿಯೊಬ್ಬರ ಸ್ವಂತ ಸಾಧನೆ ದೇಶದ ಸಾಧನೆಗೆ ಜೋಡಣೆ ಆಗುತ್ತದೆ” ಎಂದು ಹೇಳಿದರು.