ಬೆಂಗಳೂರು: ವಿಶ್ವ ಟೆನಿಸ್ ದಂತಕಥೆ ಬ್ಯೋನ್ ಬೋರ್ಗ್ ನಿನ್ನೆ ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಕಾರ್ಯಕ್ರಮಕ್ಕೆ ತಡವಾಗಿ ಬಂದರೆಂದು ಸನ್ಮಾನ ತಿರಸ್ಕರಿಸಿದ್ದಾರೆ.
ಹೀಗಾಗಿ, ನಿನ್ನೆ ನಡೆಯಬೇಕಿದ್ದ ಸನ್ಮಾನ ಕಾರ್ಯಕ್ರಮ ರದ್ದುಗೊಂಡಿದ್ದು ಇನ್ನೆರಡು ದಿನಗಳಲ್ಲಿ ಮುಖ್ಯಮಂತ್ರಿ ಕಚೇರಿಗೆ ಬೋರ್ಗ್ ಹಾಗೂ ವಿಜಯ್ ಅಮೃತರಾಜ್ ಅವರನ್ನು ಕರೆಸಿಕೊಂಡು ಅವರನ್ನು ಬೊಮ್ಮಾಯಿ ಸನ್ಮಾನಿಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಲಾನ್ ಟೆನ್ನಿಸ್ ಸಂಸ್ಥೆಯ ಮೂಲಗಳು ತಿಳಿಸಿವೆ. ಕರ್ನಾಟಕ ರಾಜ್ಯ ಟೆನಿಸ್ ಸಂಸ್ಥೆಯ ಕೋರ್ಟ್‌ನಲ್ಲಿ ಬೆಂಗಳೂರು ಓಪನ್ ಟೆನಿಸ್ ಟೂರ್ನಿ ನಡೆಯುತ್ತಿದೆ.
11 ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ವಿಜೇತ ಸ್ವೀಡನ್ ಮೂಲದ ಟೆನಿಸ್ ದಿಗ್ಗಜ ಬ್ಯೋನ್ ಬೋರ್ಗ್ ಅವರ ಪುತ್ರ ಲಿಯೋ ಬೋರ್ಗ್ ಈ ಟೂರ್ನಿಯಲ್ಲಿ ಭಾಗಿಯಾಗಿದ್ದಾರೆ. ಕೆಎಸ್ಎಲ್‌ಟಿಎಯಲ್ಲಿ ಭಾರತದ ಮಾಜಿ ಆಟಗಾರ ವಿಜಯ್ ಅಮೃತರಾಜ್ ಹಾಗೂ ಬೋರ್ಗ್ ರನ್ನು ಸಿಎಂ ಬೊಮ್ಮಾಯಿ ಸನ್ಮಾನಿಸುವ ಕಾರ್ಯಕ್ರಮ ಬೆಳಗ್ಗೆ 9.30ಕ್ಕೆ ಹಮ್ಮಿಕೊಳ್ಳಲಾಗಿತ್ತು. ಆದರೆ ಸಿಎಂ ಬಂದಿದ್ದು 11.30ಕ್ಕೆ. ಅಷ್ಟೊತ್ತಿಗಾಗಲೇ ಮಗನ ಮ್ಯಾಚ್ ಶುರುವಾಗಿದ್ದು ಗ್ಯಾಲರಿಯಲ್ಲಿ ಕುಳಿತು ಬೋರ್ಗ್ ವೀಕ್ಷಿಸುತ್ತಿದ್ದರು.
ಸಿಎಂ ಬಂದಿರುವ ಬಗ್ಗೆ ಬೋರ್ಗ್ ಅವರ ಗಮನಕ್ಕೆ ತರಲಾಯಿತು. ಪಂದ್ಯ ಮುಗಿದ ಬಳಿಕ ಬರುವುದಾಗಿ ಬೋರ್ಗ್ ಹೇಳಿದ್ದರು. ಇದರಿಂದ ಆಯೋಜಕರು ಸಮಾರಂಭ ರದ್ದುಗೊಳಿಸಬೇಕಾಯಿತು.