ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಮೂಲ ಸೌಕರ್ಯಗಳಿಗೆ ಹಣ ಕೊಟ್ಟಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ಪ್ರಧಾನಿ ಮೋದಿ ಮತ್ತು ನಾನು, ಯಡಿಯೂರಪ್ಪ ಅಭಿವೃದ್ಧಿ ಕಾರ್ಯಗಳಿಂದಾಗಿ ಬಿಜೆಪಿಗೆ ದೊಡ್ಡ ಬೆಂಬಲ ಸಿಗುತ್ತದೆ. ಕಳೆದ ಒಂದೂವರೆ ತಿಂಗಳಿಂದ ಬೆಂಬಲದ ಪ್ರಮಾಣ ಹೆಚ್ಚಾಗ್ತಾ ಇದೆ. ಇದನ್ನು ನೋಡಿದಾಗ ಪೂರ್ಣ ಪ್ರಮಾಣದಲ್ಲಿ ಬಿಜೆಪಿ ಗೆಲ್ಲಲಿದ್ದು, ನಾವು ಮತ್ತೆ ಅಧಿಕಾರಕ್ಕೆ ಬರ್ತೇವೆ ಅನ್ನೋ ವಿಶ್ವಾಸ ಹೆಚ್ಚುತ್ತಿದೆ ಎಂದು ಹೇಳಿದರು.
ರೈಲ್ವೆ, ಬಂದರು ಇತ್ಯಾದಿಗೆ ಹಣ ಕೊಟ್ಟಿದ್ದಾರೆ. ಹೀಗಾಗಿ ಮೋದಿ ರಾಜ್ಯಕ್ಕೆ ಬಂದಾಗಲೆಲ್ಲ ಭೂಮಿ ಪೂಜೆ, ಲೋಕಾರ್ಪಣೆ ಕಾರ್ಯಕ್ರಮಗಳು ನಡೆಯುತ್ತಿವೆ ಎಂದರು. ಜಿಲ್ಲೆಗೆ ಆಗಮಿಸಲಿರುವ ಪ್ರಧಾನಿ ಐಐಟಿ ಉದ್ಘಾಟನೆ, ಜಯದೇವ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸುತ್ತಾರೆ. ಅಲ್ಲದೇ ಐಐಟಿಗೆ ಹಂತಹಂತವಾಗಿ ಹಣ ಕೊಡಲಾಗುತ್ತದೆ. ಇದೊಂದು ಪ್ರತಿಷ್ಠಿತ ಸಂಸ್ಥೆ. ದೇಶದಲ್ಲಿಯೇ ನಂಬರ್ ಒನ್ ಮಾಡಲು ಕ್ರಮ ಕೈಗೊಳ್ಳಲಾಗುವದು ಎಂದು ತಿಳಿಸಿದರು.
ಜನಾರ್ದನ ರೆಡ್ಡಿ ಬಿಜೆಪಿ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರು ಬಿಜೆಪಿಯೊಂದಿಗೆ ಇದ್ದರು. ಸದ್ಯ ಯಾವುದೇ ತೀರ್ಮಾನ ಪ್ರಕಟಿಸಿಲ್ಲ. ಸೂಕ್ತ ನಿರ್ಧಾರ ತೆಗೆದುಕೊಳ್ಳಲಿ, ಆಮೇಲೆ ನೋಡೋಣ ಎಂದು ತಿಳಿಸಿದರು.