ಬೆಂಗಳೂರು: ಶಾಸಕರ ಪುತ್ರನ ನಿವಾಸ ಮತ್ತು ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ, ನಾವು ಲೋಕಾಯುಕ್ತಕ್ಕೆ ಸಂಪೂರ್ಣ ಅಧಿಕಾರ ನೀಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.
ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮಾಡಾಳ್ ಪ್ರಶಾಂತ್ ಕಚೇರಿ ಮತ್ತು ನಿವಾಸದ ಲೋಕಾಯುಕ್ತ ದಾಳಿ ವೇಳೆ ಕೋಟಿ ಕೋಟಿ ನಗದು ಸಿಕ್ಕಿರುವ ಪ್ರಕರಣಕ್ಕೆ ಸಂಬಂಧಿಸಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಬಿಡಬ್ಲ್ಯುಎಸ್ ಎಸ್ ಬಿ ಅಧಿಕಾರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮಾಡಾಳ್ ಪ್ರಶಾಂತ್ ನಿವಾಸ ಮತ್ತು ಕಚೇರಿ ಮೇಲೆ ನಡೆಸಿದ ದಾಳಿಯಲ್ಲಿ ಸಿಬ್ಬಂದಿಗೆ ಬರೋಬ್ಬರಿ 6 ಕೋಟಿ ರೂಪಾಯಿ ನಗದು ಸಿಕ್ಕಿದೆ. ಲೋಕಾಯುಕ್ತಕ್ಕೆ ಸಂಪೂರ್ಣ ಮುಕ್ತ ಅಧಿಕಾರ ನೀಡುವ ಮರು ಆದೇಶ ನೀಡಿ ಲೋಕಾಯುಕ್ತ ಮರುಸ್ಥಾಪಿಸಿದ್ದೇ ಬಿಜೆಪಿ ಎಂದು ತಿಳಿಸಿದರು.
ಲೋಕಾಯುಕ್ತ ಮುಕ್ತವಾಗಿ ಸಮಗ್ರ ತನಿಖೆ ನಡೆಸಲಿ, ಮುಕ್ತವಾಗಿ ತನಿಖೆ ನಡೆದು ಹಣ ಯಾರಿಗೆ ಸೇರಿದೆ ಎನ್ನುವ ಮಾಹಿತಿ ಹೊರಗೆ ಬರಲಿ, ಸತ್ಯ ಜನರಿಗೆ ತಿಳಿದು ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ ಎಂದು ಹೇಳಿದ್ದಾರೆ.