ಬೆಂಗಳೂರು: ಕಾಂಗ್ರೆಸ್ ಏನೇ ಮಾಡಿದರೂ ಕಾಂಗ್ರೆಸ್ ಪಕ್ಷಕ್ಕೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಉತ್ತರ ಕರ್ನಾಟಕ, ಕರಾವಳಿ, ಮಧ್ಯ ಕರ್ನಾಟಕ, ಕಲ್ಯಾಣ ಕರ್ನಾಟಕ ಸೇರಿ ರಾಜ್ಯದಾದ್ಯಂತ ಹೋಗಿ ಬಂದಿದ್ದೇನೆ ಎಂದರು. ಕರ್ನಾಟಕದಲ್ಲಿ ಬಿಜೆಪಿ ಪರ ಅಲೆ ಇದ್ದು, ಕಾಂಗ್ರೆಸ್ನವರು ಹತಾಶರಾಗಿ ಅವರ ವಿಫಲತೆ ಮುಚ್ಚಿಕೊಳ್ಳಲು ಸುಳ್ಳು ಭರವಸೆ ಕೊಡುತ್ತಿದ್ದಾರೆ.ನಾಡಿನ ಸಮಗ್ರ ಅಭಿವೃದ್ಧಿಗೆ ಪೂರಕ ಕಾರ್ಯಕ್ರಮ ಮುಂದುವರಿಸಲಿದ್ದೇವೆ ಎಂದು ತಿಳಿಸಿದರು.
ದೇವನಹಳ್ಳಿಯಲ್ಲಿ ವಿಜಯ ಪತಾಕೆ ಹಾರಿಸೋಣ ಅಲ್ಲಿ ಗೆಲ್ಲಿಸಿಕೊಡಿ. ಕರ್ನಾಟಕದಲ್ಲಿ ಗೆಲ್ಲಿಸುವುದು ನನಗೆ ಗೊತ್ತಿದೆ ಎಂದು ತಿಳಿಸಿದರು. ಪ್ರಥಮ ಬಾರಿ ಎಲ್ಲ 224 ಕ್ಷೇತ್ರಗಳಲ್ಲಿ ಬಿಜೆಪಿ ಅತ್ಯಂತ ಪ್ರಬಲವಾಗಿ 140ಕ್ಕೂ ಹೆಚ್ಚು ಸೀಟು ಗೆಲ್ಲುವ ವಿಶ್ವಾಸವಿದೆ. ಮಿಕ್ಕಿದ ಕ್ಷೇತ್ರಗಳಲ್ಲೂ ಗರಿಷ್ಠ ಪೈಪೋಟಿ ನೀಡಲಿದೆ ಎಂದು ಹೇಳಿದರು.
ಕಾಂಗ್ರೆಸ್- ಜೆಡಿಎಸ್ ಆಡಳಿತದಿಂದ ಜನರು ಬೇಸತ್ತಿದ್ದರು. ನಮ್ಮ ಪಕ್ಷ ಬಂದ ಬಳಿಕ ಅಭಿವೃದ್ಧಿಗೆ ಗರಿಷ್ಠ ಆದ್ಯತೆ ನೀಡಿದೆ. ಇವುಗಳ ಬಗ್ಗೆ ಜನಮೆಚ್ಚುಗೆ ವ್ಯಕ್ತವಾಗುತ್ತಿದೆ. ದೇವನಹಳ್ಳಿ ಗೆಲುವಿಗೆ ಪಕ್ಷ ಶಕ್ತಿ ತುಂಬಲಿದೆ. ಮತ್ತು ಹೆಚ್ಚಿನ ಶ್ರಮ ಹಾಕಲಿದೆ. ನಾನೇ ದೇವನಹಳ್ಳಿಗೆ ಭೇಟಿ ಕೊಡಲಿದ್ದೇನೆ ಎಂದು ತಿಳಿಸಿದರು.