ಹಾವೇರಿ: ಸತತ 15 ವರ್ಷಗಳಿಂದ ಆಶೀರ್ವಾದ ಮಾಡಿದ್ದೀರಿ. ಶಿಗ್ಗಾಂವಿ ಕ್ಷೇತ್ರದ ಜನರ ಪ್ರೀತಿಗೆ ನಾನು ಸೋತಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬಿಜೆಪಿ ಸಮಾವೇಶದಲ್ಲಿ ಮಾತನಾಡಿ, ನಾನು ಓಡಿ ಹೋಗುವ ಮುಖ್ಯಮಂತ್ರಿ ಅಲ್ಲ. ನನ್ನ ಕೊನೆಯ ಉಸಿರು ಇರುವವರೆಗೂ ನಿಮ್ಮ ಸೇವೆ ಮಾಡುತ್ತೇನೆ. ನಾನು ತೀರಿ ಕೊಂಡ ಮೇಲೆ ಶಿಗ್ಗಾಂವಿಯಲ್ಲೇ ಮಣ್ಣು ಮಾಡಬೇಕು ಎಂದು ಹೇಳಿದರು.
ಇದೇ ವೇಳೆ ಕಿಚ್ಚ ಸುದೀಪ್ ಮಾತನಾಡಿ, ಬೊಮ್ಮಾಯಿ ಮಾಮನನ್ನು ಮತ್ತೊಮ್ಮೆ ಗೆಲ್ಲಿಸಿ, ಮಾಮನಿಗೆ ಸಿಕ್ಕಿರುವ ಅವಧಿ ಬಹಳ ಕಡಿಮೆ. ಇಷ್ಟು ಜನ ಸೇರಿದ್ದೀರಿ ಅಂದರೆ ಅವರು ಮಾಡಿದ ಕೆಲಸ ಗೊತ್ತಾಗುತ್ತದೆ. ಅವರ ಪರ ನಾನು ಬಂದಿದ್ದೇನೆ. ನಾನು ಒಬ್ಬ ಭಾರತೀಯನಾಗಿ ಪ್ರಧಾನಿ ಮೋದಿಯವರ ಕೆಲಸವನ್ನು ಮೆಚ್ಚುತ್ತೇನೆ ಎಂದು ತಿಳಿಸಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮಾತನಾಡಿ, ಬೊಮ್ಮಾಯಿಯವರ ನಾಮಪತ್ರ ಸಲ್ಲಿಕೆ ಕೇವಲ ಶಾಸಕ ಸ್ಥಾನಕ್ಕೆ ಅಲ್ಲ, ರಾಜ್ಯ ಹೊಸ ದಿಕ್ಕಿಗೆ ಒಯ್ಯುವ ಕಾರ್ಯ ಆಗಲಿದೆ. ಬೊಮ್ಮಾಯಿ ಆತ್ಮ ವಿಶ್ವಾಸ, ಉತ್ಸಾಹ ನೋಡಿದರೇ ಬೊಮ್ಮಾಯಿ ಮುಂದಿನ 5 ವರ್ಷ ಮತ್ತೆ ಸಿಎಂ ಆಗಲಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಇನ್ನೂ ಸಿಎಂ ಬೊಮ್ಮಾಯಿಯವರು ತಮ್ಮ ತವರು ಕ್ಷೇತ್ರದಲ್ಲಿ ರೋಡ್ ಶೋ ಮಾಡಿದ್ದು, ಈ ವೇಳೆ ಕಿಚ್ಚ ಸುದೀಪ್, ಜೆಪಿ ನಡ್ಡಾ ಭಾಗಿಯಾಗಿದ್ದರು. ರೋಡ್ ಶೋ ಫೋಟೋಗಳನ್ನು ಸಿಎಂ ಬೊಮ್ಮಾಯಿಯವರು ತಮ್ಮ ಟ್ವಿಟ್ಟರ್ ಲ್ಲಿ ಹಂಚಿಕೊಂಡಿದ್ದಾರೆ. ಸಿಎಂ ಬೊಮ್ಮಾಯಿ ನಾಮಪತ್ರ ಸಲ್ಲಿಸುವ ವೇಳೆ ಜೆಪಿ ನಡ್ಡಾ, ಗೋವಿಂದ ಕಾರಜೋಳ, ಕಿಚ್ಚ ಸುದೀಪ್ ಸಾಥ್ ನೀಡಿದ್ದಾರೆ.