ಮೈಸೂರು: ಬಿಜೆಪಿ ಜನಪರ ಸರ್ಕಾರವಾಗಿದ್ದು, ನಿಮ್ಮ ಆಶೀರ್ವಾದ ಸದಾ ನಮ್ಮ ಮೇಲಿರಲಿ ಜನರ ಸಂಕಷ್ಟಗಳಿಗೆ ಸದಾ ಸ್ಪಂದಿಸೋದಾಗಿ ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ವಿವಿಧ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಸವಲತ್ತು ವಿತರಿಸಿ ಮಾತನಾಡಿದರು. ಬಿಜೆಪಿ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿದೆ. ನಮ್ಮ ಹಣೆಬರಹ ಬರೆಯುವ ಶಕ್ತಿ ದುಡಿಮೆಯಲ್ಲಿದೆ. ನಮ್ಮ ಬದುಕಿನಲ್ಲಿ, ಆರೋಗ್ಯದಲ್ಲಿ, ಶಿಕ್ಷಣದಲ್ಲಿ ಬದಲಾವಣೆಯಾಗುತ್ತದೆ. ನಿಮ್ಮ ಬದುಕು ಉಜ್ವಲವಾಗಲು ನಮಗೆ ಬೆಂಬಲ ನೀಡಿ ಎಂದು ಮನವಿ ಮಾಡಿದರು.
ಹೆಣ್ಣು ಮಕ್ಕಳಿಗೆ ಪದವಿವರೆಗೂ ಉಚಿತ ಶಿಕ್ಷಣ, ಉಚಿತ ಬಸ್ ಪಾಸ್, 4 ಸಾವಿರ ಅಂಗನವಾಡಿಗಳ ಸ್ಥಾಪನೆ, ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ ಮೂಲಕ ಸ್ವಯಂ ಉದ್ಯೋಗ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ರೈತ ವಿದ್ಯಾನಿಧಿ ಯೋಜನೆ ಮೈಸೂರಿನ 20ಸಾವಿರ ಮಂದಿ ಸೇರಿದಂತೆ 13 ಲಕ್ಷ ರೈತರ ಮಕ್ಕಳಿಗೆ 10 ಸಾವಿರದವರೆಗೆ ಶಿಷ್ಯ ವೇತನ ನೀಡಲಾಗಿದೆ, ಬಡವರ ಆರ್ಥಿಕ ಸುಧಾರಣೆಯಾದರೆ ರಾಜ್ಯ ಶ್ರೀಮಂತವಾಗುತ್ತದೆ. ಸರ್ಕಾರ ವಿಧಾನಸೌಧದಲ್ಲಿಲ್ಲ, ಜನರ ನಡುವೆಯೇ ಇದೆ ಎಂದರು.
‘ಪರಿಶಿಷ್ಟರು ಜಾಗೃತರಾಗಿದ್ದಾರೆ. ಬಿಜೆಪಿಯತ್ತ ಮುಖ ಮಾಡಿರುವುದರಿಂದ ಕಾಂಗ್ರೆಸ್‌ನವರು ವಿಲವಿಲ ಒದ್ದಾಡುತ್ತಿದ್ದಾರೆ. ಭಾಷಣದಿಂದ ಅಹಿಂದ ಸಮುದಾಯ ಉದ್ಧಾರವಾಗುವುದಿಲ್ಲ. ನೀವು ಮಾತ್ರ ಮುಂದೆ ಹೋಗಿದ್ದೀರಿ’ ಎಂದು ಸಿದ್ದರಾಮಯ್ಯ ಹೆಸರು ಪ್ರಸ್ತಾಪಿಸದೇ ಕುಟುಕಿದರು.