ಬಾಗಲಕೋಟೆ: ಯಾಕೆ ಸಂಪುಟಕ್ಕೆ ಈಶ್ವರಪ್ಪನನ್ನು ತೆಗೆದುಕೊಂಡಿಲ್ಲ ಎಂದು ಮಾಧ್ಯಮದ ಮೂಲಕ ನಾನು ಮುಖ್ಯಮಂತ್ರಿಯವರಿಗೆ ಕೇಳುತ್ತೇನೆ ನೀವು ರಾಜ್ಯದ ಜನತೆಗೆ ಉತ್ತರ ಕೊಡಿ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ಕೇಂದ್ರ ನಾಯಕರ ತೀರ್ಮಾನ ಎಂದು ಅವರು ಹೇಳಬಹುದು. ಆದರೆ ನನಗೆ ಗೊತ್ತಿಲ್ಲ. ಯಾಕೆಂದರೆ ಮುಖ್ಯಮಂತ್ರಿಯವರಿಗೆ ತಮ್ಮ ಸಂಪುಟದಲ್ಲಿ ಯಾರ್ಯಾರು ಮಂತ್ರಿಗಳನ್ನು ಇಟ್ಟುಕೊಳ್ಳಬೇಕು ಎಂಬ ಅಧಿಕಾರ ಇರುತ್ತದೆ ಎಂದರು. ಕ್ಲೀನ್ ಚಿಟ್ ತೆಗೆದುಕೊಂಡು ನಿರಪರಾಧಿ ಅಂತ ತೀರ್ಮಾನ ಆದ ಮೇಲೂ ಇಡೀ ರಾಜ್ಯದ ಜನ ನನ್ನ ಪ್ರಶ್ನೆ ಮಾಡುತ್ತಿದ್ದು, ನನಗೆ ಉತ್ತರ ಕೊಡಲು ಬರುವುದಿಲ್ಲ. ಇದಕ್ಕೆ ಮುಖ್ಯಮಂತ್ರಿಯವರೇ ಉತ್ತರಿಸಲಿ ಎಂದರು.
ನಾನು 1989ರಲ್ಲಿ ಮೊದಲ ಬಾರಿ ವಿಧಾನಸಭೆಗೆ ಕಾಲಿಟ್ಟಿದ್ದೆ. ಅಂದಿನಿಂದ ಒಂದೇ ಒಂದು ಅಧಿವೇಶನದಲ್ಲಿ ರಜೆ ತೆಗೆದುಕೊಂಡಿಲ್ಲ, ಚಕ್ಕರ್ ಹೊಡೆಯಲಿಲ್ಲ. ವಿಧಾನಸಭೆಯಲ್ಲಿ ಒಂದು ದಿನವೂ ನಿದ್ದೆ ಮಾಡಲಿಲ್ಲ. ಅನೇಕ ಮಹಾಪುರುಷರು ನಿದ್ದೆ ಮಾಡುವುದನ್ನು ನೀವು ನೋಡಿರುತ್ತೀರಿ. ವಿಧಾನಸೌಧದ ಪಾವಿತ್ರ್ಯತೆ ನನಗೆ ಗೊತ್ತು. ಆದರೆ ಕ್ಲೀನ್ ಚಿಟ್ ಸಿಕ್ಕರೂ ಯಾಕೆ ಸಚಿವ ಸ್ಥಾನ ನೀಡಿಲ್ಲ ಎಂದು ನನಗೆ ಗೊತ್ತಿಲ್ಲ ಎಂದು ಈಶ್ವರಪ್ಪ ಅವರು ಹೇಳಿದರು.
ಇದಕ್ಕೆ ಸಿಎಂ ಪ್ರತಿಕ್ರಿಯಿಸಿದ್ದುನೀವೇ ಸೃಷ್ಟಿ ಮಾಡಿಕೊಂಡು ಮಾತನಾಡಬೇಡಿ, ನಾನು ಈಶ್ವರಪ್ಪ ಜೊತೆ ಮಾತನಾಡುತ್ತೇನೆ ಎಂದು ಹೇಳಿದರು. ಸಚಿವ ಸ್ಥಾನ ಕೊಡುತ್ತಿಲ್ಲ ಅಂತಾ ಈಶ್ವರಪ್ಪ ಹೇಳಿಕೆ ಬಗ್ಗೆ ಮುಖ್ಯಮಂತ್ರಿಯವರನ್ನು ಕೇಳಿದಾಗ ಗರಂ ಆಗಿ ಉತ್ತರಿಸಿದ ಅವರು, ಆ ತರ ಏನೂ ಇಲ್ಲ ನೀವೇ ಸೃಷ್ಟಿ ಮಾಡಿಕೊಂಡು ಮಾತನಾಡಬೇಡಿ, ನಾನು ಈಶ್ವರಪ್ಪ ಜೊತೆ ಮಾತನಾಡುತ್ತೇನೆ ಎಂದು ಹೇಳಿದರು.