ಮೈಸೂರು: ಕುಮಾರಸ್ವಾಮಿ ಹೊಟ್ಟೆ ಕಿಚ್ಚಿನಿಂದ, ದ್ವೇಷದಿಂದ ಸುಳ್ಳು ಸುಳ್ಳು ಆರೋಪ ಮಾಡುತ್ತಿದ್ದಾರೆ. ಅವರಿಗೆ ಸುಳ್ಳೇ ಮನೆ ದೇವರು. ನಮಗೆ ರಾಜಕೀಯದಲ್ಲಿ ದ್ವೇಷ ಗೊತ್ತಿಲ್ಲ.
ಯಾರಾದರೂ ತಪ್ಪು ಮಾಡಿದ್ದರೆ ಅದನ್ನು ಒಪ್ಪುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಹೊಟ್ಟೆ ಉರಿಯಿಂದ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಅವರ ಹಾಗೆ ನಾವೂ ದ್ವೇಷದ ರಾಜಕೀಯ ಮಾಡಿಲ್ಲ, ಮಾಡುವುದೂ ಇಲ್ಲ. ಕುಮಾರಸ್ವಾಮಿ ಹೇಳುವುದೆಲ್ಲವೂ ಸುಳ್ಳು ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ : ಆರು ತಿಂಗಳಿನಿಂದ ಪಡಿತರ ಪಡೆಯದವರ ಕಾರ್ಡ್‌ಗಳು ರದ್ದು
ಕುಮಾರಸ್ವಾಮಿ ಇವತ್ತಿನವರೆಗೆ ಯಾವುದಾದರೂ ಸತ್ಯ ಹೇಳಿದ್ದರೆ ತೋರಿಸಲಿ? ಒಂದೇ ಒಂದು ವಿಚಾರದಲ್ಲಿ ಸತ್ಯ ಹೇಳಿದ್ದಾರಾ? ಅವರು ಬರೀ ಹಿಟ್ ಅಂಡ್ ರನ್ ಮಾಡುತ್ತಾರೆ. ನನ್ನ ಮಗನ ವಿರುದ್ಧವೇ ನಿನ್ನೆ ಸುಮ್ಮನೆ ಸುಳ್ಳು ಹಬ್ಬಿಸಿದ್ದರು. ನನ್ನ ಮಗ ನನಗಾಗಿ ಕ್ಷೇತ್ರ ಬಿಟ್ಟುಕೊಟ್ಟಿದ್ದಾನೆ.
ಈಗ ನನ್ನ ಪರವಾಗಿ ಕ್ಷೇತ್ರದಲ್ಲಿ ಜನರ ಕೆಲಸ ಮಾಡುತ್ತಿದ್ದಾನೆ. ಜನರ ಕೆಲಸ ಮಾಡುವುದು ತಪ್ಪಾ ಎಂದು ಪ್ರಶ್ನಿಸಿದ್ದಾರೆ.
ಕೆಡಿಪಿ ಸದಸ್ಯನಾಗಿರುವ ಕಾರಣ ಡಾ.ಯತೀಂದ್ರ ಕೆಲವು ವಿಚಾರಗಳ ಬಗ್ಗೆ ನನ್ನ ಜೊತೆ ಚರ್ಚೆ ಮಾಡಿದ್ದಾನೆ. ಅದಕ್ಕೆ ಬೇರೆ ಬೇರೆ ಅರ್ಥ ಕಲ್ಪಿಸುವ ಕೆಲಸ ಮಾಡಿದ್ದಾರೆ ಎನ್ನುವ ಮೂಲಕ ಕುಮಾರಸ್ವಾಮಿ ವಿರುದ್ಧ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಜೆಡಿಎಸ್ ಹಾಗೂ ಬಿಜೆಪಿ ಶಾಸಕರನ್ನು ಪಕ್ಷಕ್ಕೆ ಕರೆತರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಮಾಜಿ ಸಚಿವ ವಿ.ಸೋಮಣ್ಣ ಪಕ್ಷಕ್ಕೆ ಬಂದರೂ ಸ್ವಾಗತ. ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತವನ್ನು ಒಪ್ಪಿ ಯಾರೇ ಬಂದರೂ ಸ್ವಾಗತಿಸುತ್ತೇನೆ. ಜಿ.ಟಿ ದೇವೇಗೌಡ ಹಾಗೂ ಸೋಮಣ್ಣ ಅವರನ್ನು ಪಕ್ಷಕ್ಕೆ ಆಹ್ವಾನಿಸಿರುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಸಿದ್ದರಾಮಯ್ಯ ಜಾರಿಕೊಂಡರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.