ಬೆಂಗಳೂರು : ರಾಜ್ಯ ಪೊಲೀಸ್ ಇಲಾಖೆ ಪರಿಚಯಿಸಿರುವ ವಿನೂತನ ಪರಿಸರ ಸ್ನೇಹಿ ಇ-ಎಫ್ಐಆರ್ ವ್ಯವಸ್ಥೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಚಾಲನೆ ನೀಡಿದರು.
ಕರ್ನಾಟಕ ರಾಜ್ಯ ಹಿರಿಯ ಪೊಲೀಸ್ ಅಧಿಕಾರಿಗಳ ಸಮಾವೇಶದ ಸ್ಮಾರ್ಟ್ ಸೌಲಭ್ಯಕ್ಕೆ ಸಿಎಂ ಚಾಲನೆ ಕೊಟ್ಟರು. ಗೃಹ ಸಚಿವ ಡಾ.ಜಿ ಪರಮೇಶ್ವರ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.


ಏನಿದು ಇ-ಎಫ್ಐಆರ್ ವ್ಯವಸ್ಥೆ?
ಇ-ಎಫ್ಐಆರ್ ಎಂಬ ಕಾಗದ ರಹಿತ ವ್ಯವಸ್ಥೆ ವಾಹನಗಳು ಕಳುವಾದಾಗ ಎಫ್ಐಆರ್ ದಾಖಲಿಸಲು ಸಾರ್ವಜನಿಕರಿಗೆ ನೆರವಾಗಲಿದೆ. ಇದರಿಂದ ಜನರು ಸುಖಾಸುಮ್ಮನೆ ಪೊಲೀಸ್ ಠಾಣೆಗೆ ಅಲೆದಾಡುವುದು ತಪ್ಪಲಿದೆ. ಬೆರಳ ತುದಿಯಲ್ಲೇ ತಮ್ಮ ಪ್ರಕರಣದ ಮಾಹಿತಿ ದೊರೆಯಲಿದೆ.


ವಾಹನ ಕಳುವಾದರೆ ಈ ಹಿಂದೆ ಜನರು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಬೇಕಿತ್ತು. ಇನ್ಮುಂದೆ ಈ ಸಮಸ್ಯೆ ತಪ್ಪಲಿದೆ. ಜನರು ಇ-ಎಫ್ಐಆರ್ ದಾಖಲಿಸಲು ರಾಜ್ಯ ಪೊಲೀಸ್ ಇಲಾಖೆಯ ವೆಬ್ ಸೈಟ್ ಗೆ ಭೇಟಿ ನೀಡಿ, ಅಲ್ಲಿ ಸಿಟಿಜನ್ ಡೆಸ್ಕ್ ಆಯ್ಕೆ ಮಾಡಬೇಕು. ಬಳಿಕ ವಾಹನದ ವಿವರ ಮತ್ತು ದೂರುದಾರರ ಮಾಹಿತಿ ನಮೂದಿಸಬೇಕು. ಒಂದು ಸಾರಿ ವಾಹನದ ನೋಂದಣಿ ಸಂಖ್ಯೆ ನಮೂದಿಸಿದರೆ ವೆಬ್ ಸೈಟ್ ತಾನಾಗಿಯೇ ವಾಹನದ ಸಂಪೂರ್ಣ ಮಾಹಿತಿ ತುಂಬಿ ಎಫ್ಐಆರ್ ದಾಖಲಿಸಲಿದೆ.


ಪೊಲೀಸ್ ಅಧಿಕಾರಿಗಳ ಸಮಾವೇಶದಲ್ಲಿ ಆ್ಯಂಟಿ ಫೋರೆನ್ಸಿಕ್ ವಿಷಯದಲ್ಲಿ ಅಭಿವೃದ್ಧಿಪಡಿಸಿದ ತಾಂತ್ರಿಕ ಸಂಶೋಧನಾ ವರದಿಯನ್ನು ಸಿಎಂ ಅನಾವರಣಗೊಳಿಸಿದರು ಮತ್ತು ಇ-ಚಲನ್ ವ್ಯವಸ್ಥೆಗೆ ಚಾಲನೆ ನೀಡಿದರು. ಇ-ಚಲನ್ ವ್ಯವಸ್ಥೆ ನವೆಂಬರ್ 1 ಕನ್ನಡ ರಾಜ್ಯೋತ್ಸವದಂದು
ರಾಜ್ಯಾದ್ಯಂತ ಜಾರಿಗೆ ಬರಲಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.