ಬೆಂಗಳೂರು : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆಯ ಮೊದಲ ದಿನ ಎಲ್ಲೆಡೆ ಒಂದು ಫೋಟೊ ವೈರಲ್ ಆಗಿತ್ತು. ಇವೆಲ್ಲದರ ನಡುವೆ ಆ ಒಂದು ದೃಶ್ಯ ರಾಜ್ಯದ ಗಮನ ಸೆಳೆಯಿತು. ಧಾರವಾಡ ಬಸ್ ನಿಲ್ದಾಣದಲ್ಲಿ ವಯಸ್ಸಾದ ಅಜ್ಜಿಯೊಬ್ಬರು ಮೊದಲ ಸಲ ಉಚಿತ ಪ್ರಯಾಣ ಮಾಡುವಾಗ ಬಸ್ ಮೆಟ್ಟಿಲಿಗೆ ತಲೆಬಾಗಿ ನಮಸ್ಕರಿಸಿ ಹತ್ತುವ ದೃಶ್ಯ, ಸಾಮಾಜಿಕ ಜಾಲತಾಣದಲ್ಲಂತೂ ಭಾರೀ ವೈರಲ್ ಆಗಿತ್ತು. ಆ ಅಜ್ಜಿ ಉಚಿತ ಬಸ್ ಪ್ರಯಾಣ ಮಾಡುವ ಮುನ್ನ ಬಸ್ಸಿಗೆ ಹಣೆಬಾಗಿ ಸಾರ್ಥಕ ಭಾವ ಮರೆದಿದ್ದರು.
ಇದನ್ನೂ ಓದಿ : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲೋದು ಖಚಿತ : ಕೋಟಾ ಶ್ರೀನಿವಾಸ ಪೂಜಾರಿ
ನಿನ್ನೆ ಖುದ್ದಾಗಿ ಶಕ್ತಿ ಯೋಜನೆಯ ಆ ಫಲಾನುಭವಿಯನ್ನು ಭೇಟಿಯಾದ ಮುಖ್ಯಮಂತ್ರಿಗಳು ಸಂತೋಷ ವ್ಯಕ್ತಪಡಿಸದ್ದಾರೆ. ಈ ಕುರಿತು ತಮ್ಮ ಟ್ಟಿಟ್ಟರ್ ಖಾತೆಯಲ್ಲಿ ಬರೆದುಕೊಂಡಿರುವ ಸಿದ್ದರಾಮಯ್ಯ, ಶಕ್ತಿ ಯೋಜನೆ ಜಾರಿಯಾದ ದಿನ ಅತ್ಯಂತ ಸಂತಸದಿಂದ ಸರ್ಕಾರಿ ಬಸ್ಸಿನ ಮೆಟ್ಟಿಲುಗಳಿಗೆ ನಮಸ್ಕರಿಸಿ ಪ್ರಯಾಣ ಬೆಳೆಸಿದ್ದ ಬೆಳಗಾವಿ ಜಿಲ್ಲೆಯ ಸಂಗೊಳ್ಳಿಯ ಸಂಗವ್ವ ಅವರನ್ನು ಇಂದು ಖಾಸಗಿ ವಾಹಿನಿಯ ಕಾರ್ಯಕ್ರಮದಲ್ಲಿ ಭೇಟಿಯಾದದ್ದು ನನ್ನಲ್ಲಿ ಅಚ್ಚರಿ ಮತ್ತು ಖುಷಿಯ ಜೊತೆಗೆ ಸಾರ್ಥಕ್ಯದ ಭಾವ ಮೂಡಿಸಿತು ಎಂದು ಅನಿರೀಕ್ಷಿತ ಭೇಟಿಯನ್ನು ಬಣ್ಣಿಸಿದ್ದಾರೆ.
ಮಹಿಳೆಯರ ಸಬಲೀಕರಣಕ್ಕೆ ನಾವು ಬೆಂಬಲವಾಗಿ ನಿಲ್ಲಬೇಕು ಎನ್ನುವ ಕಾಳಜಿಯಿಂದ ಜಾರಿಗೆ ತಂದಿರುವ ಶಕ್ತಿ ಯೋಜನೆಯ ಮೊದಲ ದಿನವೇ ಸಂಗವ್ವ ಅವರಿಂದ ದೊರೆತ ಪ್ರತಿಕ್ರಿಯೆ ಕಂಡು ನಮ್ಮ ಯೋಜನೆ ನೂರಕ್ಕೆ ನೂರರಷ್ಟು ಯಶಸ್ವಿಯಾಗಲಿದೆ ಎಂಬ ಭರವಸೆ ನನ್ನಲ್ಲಿ ಮೂಡಿತ್ತು. ಈ ದಿನ ಇಂಥದ್ದೊಂದು ಭೇಟಿಯ ಅವಕಾಶ ಕಲ್ಪಿಸಿದ ಖಾಸಗಿ ವಾಹಿನಿಗೆ ಧನ್ಯವಾದಗಳುನ್ನು ತಿಳಿಸಿದ್ದಾರೆ.
ಯಾರಿವರು ಸಂಗವ್ವ..?
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಗೊಳ್ಳಿಯ ಸಂಗವ್ವ ಅವರ ಆ ಫೋಟೊವನ್ನು ಸ್ವತಃ ಸಿಎಂ ಸಿದ್ದರಾಮಯ್ಯನವರೇ ತಮ್ಮ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ‘ನಾವು ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಘೋಷಿಸಿದಾಗ ಶ್ರಮಪಡದೆ ಸಮಾಜದ ಎಲ್ಲಾ ವಿಧದ ಸೌಲಭ್ಯಗಳನ್ನು ಕೂತಲ್ಲಿಯೇ ಅನುಭವಿಸುತ್ತಿರುವ ಜನರಿಂದ ತರತರನಾದ ಟೀಕೆಗಳು, ಕುಹಕ, ವ್ಯಂಗ್ಯಗಳು ವ್ಯಕ್ತವಾದವು’ ಎಂದಿದ್ದರು.
‘ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಇಂದು ಶಕ್ತಿ ಯೋಜನೆಯನ್ನು ಜಾರಿಗೆ ಮಾಡಿದ್ದೆವು. ನಮ್ಮ ಯೋಜನೆ ಜಾರಿಗೊಂಡ ನಂತರ ತಾಯಿಯೊಬ್ಬರು ಧಾರವಾಡ ಬಸ್ ನಿಲ್ದಾಣದಲ್ಲಿ ಬಸ್ಸಿಗೆ ನಮಸ್ಕರಿಸಿ ಅತ್ಯಂತ ಸಂತೋಷದಿಂದ ಉಚಿತ ಪ್ರಯಾಣ ಬೆಳೆಸಿದರು. ನಾವು ಎಷ್ಟು ಅನುದಾನ ಖರ್ಚು ಮಾಡುತ್ತೇವೆ ಎನ್ನುವುದಕ್ಕಿಂತ ಯಾರಿಗಾಗಿ ಆ ಹಣ ವಿನಿಯೋಗಿಸುತ್ತಿದ್ದೇವೆ ಎಂಬುದು ಮುಖ್ಯ. ಈ ಕ್ಷಣ ಇನ್ನೂ ನೂರು ವಿಧದಲ್ಲಿ ಟೀಕೆಗಳು ಎದುರಾದರೂ ಅದ್ಯಾವುದಕ್ಕೂ ಕುಗ್ಗದಂತೆ ನನ್ನನ್ನು ಗುರಿಯೆಡೆಗೆ ಮತ್ತಷ್ಟು ದೃಢವಾಗಿಸಿದೆ. ಯೋಜನೆ ಜಾರಿಗೆ ಕೊಟ್ಟ ನನಗೆ ಸಂತೃಪ್ತಿ ನೀಡಿದ ಜೊತೆಗೆ ಬಹುಕಾಲ ನೆನಪಿನಲ್ಲಿ ಉಳಿಯುವ ಚಿತ್ರವಿದು’ ಎಂದು ಯೋಜನೆಗೆ ಚಾಲನೆ ನೀಡಿದ ದಿನ ಟ್ವೀಟ್ಟರ್‌ನಲ್ಲಿ ಸಿಎಂ ಸಂತಸ ಪಟ್ಟಿದ್ದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.