Thursday, September 28, 2023
spot_img
- Advertisement -spot_img

ʼಕಲ್ಯಾಣ ಕರ್ನಾಟಕʼ ಕಳೆಗಟ್ಟಲು ಕರೆ ಕೊಟ್ಟ ಸಿಎಂ

ಬೆಂಗಳೂರು: ಹಿಂದಿನ ಹೈದರಾಬಾದ್‌ ಕರ್ನಾಟಕವು ಇಂದು ಕಲ್ಯಾಣ ಕರ್ನಾಟಕವಾಗಿ ಹೊರಹೊಮ್ಮಿದ ದಿನ. ಇದರ ಅಂಗವಾಗಿ ಇಂದು ಕಲಬುರಗಿಯಲ್ಲಿ ಇಂದು ʼಕಲ್ಯಾಣ ಕರ್ನಾಟಕ ಉತ್ಸವʼವನ್ನು ರಾಜ್ಯ ಸರ್ಕಾರ ಅದ್ಧೂರಿಯಾಗಿ ಹಮ್ಮಿಕೊಂಡಿದೆ.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ʼಹೈದರಾಬಾದ್ ನಿಜಾಮರ ದುರಾಡಳಿತ, ನಿರ್ಲಕ್ಷ್ಯದಿಂದಾಗಿ ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದ ಹೈದರಾಬಾದ್ ಕರ್ನಾಟಕ ಪ್ರದೇಶವನ್ನು ಸೈನಿಕ ಕಾರ್ಯಾಚರಣೆ ಮೂಲಕ ಅಖಂಡ ಭಾರತದ ಆಡಳಿತಕ್ಕೊಳಪಡಿಸಿ, ಅಭಿವೃದ್ಧಿಯ ಪಥದಲ್ಲಿ ಒಟ್ಟಾಗಿ ಹೆಜ್ಜೆ ಹಾಕಲು ಆರಂಭಿಸಿದ ದಿನವಿದು ಎಂದು ನೆನೆದರು.

ಪ್ರಾದೇಶಿಕ ಅಸಮಾನತೆ ಎದುರಿಸುತ್ತಿರುವ ಕಲ್ಯಾಣ ಕರ್ನಾಟಕ ಜಿಲ್ಲೆಗಳ ಸರ್ವತೋಮುಖ ಅಭಿವೃದ್ಧಿಗೆ ನಾವು ಬದ್ಧರಿದ್ದು, ಮುಂದಿನ ಐದು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕವನ್ನು ಸಮೃದ್ಧ ಕರ್ನಾಟಕವಾಗಿ ರೂಪಿಸಲು ಶಕ್ತಿಮೀರಿ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಪ್ರಾದೇಶಿಕ ಅಸಮಾನತೆಯಿಂದಾಗಿ ಅಭಿವೃದ್ಧಿಯ ಹಾದಿಯಲ್ಲಿ ಹಿಂದುಳಿದಿದ್ದ ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ 371(ಜೆ) ವಿಶೇಷ ಸ್ಥಾನಮಾನ ದೊರಕಿಸಿಕೊಡಲು ನಮ್ಮವರು ತೋರಿದ ಬದ್ಧತೆ ಮತ್ತು ಕಾಳಜಿಯ ಫಲವಾಗಿ ಇಂದು ಈ ಭಾಗದ ಜನರು ನೆಮ್ಮದಿಯ ದಿನಗಳನ್ನು ಕಾಣುವಂತಾಗಿದೆ ಎಂದರು.

ನೈಸರ್ಗಿಕ ಸಂಪನ್ಮೂಲಗಳ ಕೊರತೆಯ ಕಾರಣದಿಂದಾಗಿ ಹಿಂದುಳಿದಿರುವ ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ನಮ್ಮ ಸರ್ಕಾರವು ಹೆಚ್ಚಿನ ಪ್ರಾಶಸ್ತ್ಯ ನೀಡಿ, ಪ್ರಸಕ್ತ ಸಾಲಿನಲ್ಲಿ ಹಲವು ಅಭಿವೃದ್ಧಿ ಯೋಜನೆಗಳನ್ನು ಘೋಷಿಸಿದೆ. ಕಲ್ಯಾಣ ಕರ್ನಾಟಕವನ್ನು ರಾಜ್ಯದ ಇತರೆ ಜಿಲ್ಲೆಗಳ ಅಭಿವೃದ್ಧಿ ವೇಗಕ್ಕೆ ಸಮಾನವಾಗಿ ಮುನ್ನಡೆಸಲು ನಾವು ಬದ್ಧರಿದ್ದು, ಮುಂದಿನ ಐದು ವರ್ಷಗಳಲ್ಲಿ ಈ ಭಾಗದ ಕೃಷಿ, ಕೈಗಾರಿಕೆ, ನೀರಾವರಿ, ವೈದ್ಯಕೀಯ ಸೌಲಭ್ಯಗಳು, ಶಿಕ್ಷಣ, ಸಾರಿಗೆ ಇನ್ನಿತರೆ ಎಲ್ಲಾ ವಲಯಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದರು.

ಭ್ರಷ್ಟಾಚಾರ ಮತ್ತು ಕೋಮುವಾದದಲ್ಲಿ ಮುಳುಗಿದ್ದ ಹಿಂದಿನ ಬಿಜೆಪಿ ಸರ್ಕಾರವು ಕಲ್ಯಾಣ ಕರ್ನಾಟಕವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದರಿಂದ ಈ ಭಾಗದ ಅಭಿವೃದ್ಧಿ ವೇಗವು ಆಮೆಗತಿಯಲ್ಲಿ ಸಾಗುತ್ತಿತ್ತು. ನಮ್ಮ ಸರ್ಕಾರವು ಅಲ್ಪ ಸಮಯದಲ್ಲೇ ಹಲವು ಹೊಸ ಕಾರ್ಯಕ್ರಮಗಳ ಜಾರಿ ಮತ್ತು ಹಳೆಯ ಯೋಜನೆಗಳನ್ನು ಪೂರ್ಣಗೊಳಿಸಲು ಕ್ರಮಕೈಗೊಂಡಿದ್ದರಿಂದ ಕಲ್ಯಾಣ ಕರ್ನಾಟಕವು ರಾಜ್ಯದ ಇತರೆ ಜಿಲ್ಲೆಗಳಿಗೆ ಸಮನಾಗಿ ಪ್ರಗತಿಯ ಹಾದಿಯಲ್ಲಿ ಸಾಗುತ್ತಿದೆ ಎಂದು ಹೇಳಿದರು.

6,795 ಮಂದಿಗೆ ವೈದ್ಯಕೀಯ ಶಿಕ್ಷಣ: ಕಲ್ಯಾಣ ಕರ್ನಾಟಕದ ಅಭಿವೃದ್ಧಿ ವಿಚಾರದಲ್ಲಿ ನಮ್ಮ ನಾಯಕರು ತೋರಿದ ಬದ್ಧತೆ ಮತ್ತು ಕಾಳಜಿಯು ವೈದ್ಯರಾಗಬೇಕೆಂಬ ಸಾವಿರಾರು ಯುವಜನರ ಕನಸನ್ನು ನನಸಾಗಿಸಿದೆ. ಸಂವಿಧಾನಕ್ಕೆ ತಿದ್ದುಪಡಿ ತಂದು 371(ಜೆ) ವಿಶೇಷ ಮೀಸಲು ಸೌಲಭ್ಯ ನೀಡಿದ ನಂತರದಿಂದ ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಮೆಡಿಕಲ್ ಕಾಲೇಜುಗಳಲ್ಲಿ ಶೇ. 70 ಸೀಟುಗಳು ಹಾಗೂ ಇತರೆ ಜಿಲ್ಲೆಗಳ ಮೆಡಿಕಲ್ ಕಾಲೇಜುಗಳಲ್ಲಿ ಶೇ.8ರಷ್ಟು ಸೀಟುಗಳು ಈ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಲಭ್ಯವಾಗುತ್ತಿದೆ. ಕಳೆದ 9 ವರ್ಷಗಳಲ್ಲಿ ಕಲ್ಯಾಣ ಕರ್ನಾಟಕದ ಒಟ್ಟು 6,795 ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆದಿದ್ದಾರೆ ಎಂಬುದನ್ನು ಹೆಮ್ಮೆಯಿಂದ ತಿಳಿಸಬಯಸುತ್ತೇನೆ ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದರು.

ಆರೋಗ್ಯ ಕಾರ್ಯಕ್ರಮಗಳಿಗೆ ಚಾಲನೆ: ಇಂದು ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರೋಗ್ಯ ಸಂಬಂಧಿ ಕಾರ್ಯಕ್ರಮಗಳನ್ನು ಉದ್ಘಾಟಿಸಿದರು.

ಆರೋಗ್ಯ ಮಿತ್ರ-ಸ್ಮಾರ್ಟ್ ಹೆಲ್ತ್ ಕಿಯೋಸ್ಕ್ ಗಳ ಮೂಲಕ ತಪಾಸಣೆ ಮತ್ತು ಶೀಘ್ರ ರೋಗ ಪತ್ತೆ ಹಾಗೂ ನಿಯಂತ್ರಣಕ್ಕೆ ತಂತ್ರಜ್ಞಾನ ಬಳಸಿ ವಿಶಿಷ್ಟ ಹೆಲ್ತ್ ಎಟಿಎಂ ಜಾರಿಮಾಡಲಾಗಿದೆ. ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಕಲಬುರಗಿ ಜಿಲ್ಲಾ ಆಡಳಿತ ಮತ್ತು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯಿಂದ ವತಿಯಿಂದ ಜಿಲ್ಲೆಯಲ್ಲಿ ‘ಆರೋಗ್ಯ ಮಿತ್ರ’ ಯೋಜನೆಯನ್ನು ಜಾರಿ ಮಾಡುತ್ತಿದ್ದು, ಕಲಬುರಗಿ ಜಿಲ್ಲೆಗೆ ಹೆಚ್.ಪಿ ಎಂಟರ್‌ಪ್ರೈಸಸ್ ವತಿಯಿಂದ 25 ಹೆಲ್ತ್ ಎಟಿಎಂ ಘಟಕಗಳನ್ನು CSR ಅನುದಾನದಡಿಯಲ್ಲಿ ಲೋಕಾರ್ಪಣೆಗೊಳಿಸಲಾಯಿತು.

ಇದನ್ನೂ ಓದಿ: PM Modi Birthday : 73ನೇ ವಸಂತಕ್ಕೆ ಕಾಲಿಟ್ಟ ಪ್ರಧಾನಿ ಮೋದಿ; ಇನ್ನೆರಡು ವರ್ಷಕ್ಕೆ ಪದತ್ಯಾಗ ಮಾಡ್ತಾರಾ?

ಜನಸ್ನೇಹಿ ಹೆಲ್ತ್ ಎಟಿಎಂ-ಆರೋಗ್ಯ ಎಟಿಎಂ: ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ತಂತ್ರಜ್ಞಾನವಾಗಿದ್ದು ಪ್ರಾಥಮಿಕ ಮತ್ತು ತಡೆಗಟ್ಟಬಹುದಾದ ಆರೋಗ್ಯ ಸೇವೆಗಳನ್ನು ಸುಲಭವಾಗಿ ಹಾಗೂ ಕೈಗೆಟುಕುವ ದರದಲ್ಲಿ ಒದಗಿಸುತ್ತದೆ. ನಗರ ಪ್ರದೇಶಗಳಲ್ಲಿ ಜನರ ಜೀವನ ಶೈಲಿಗೆ ಅನುಗುಣವಾಗಿ, ಕಡಿಮೆ ಸಮಯದಲ್ಲಿ ಪರೀಕ್ಷೆಗಳನ್ನು ಮಾಡುವ ಮೂಲಕ ಸಮಯ ಮತ್ತು ಹಣವನ್ನು ಉಳಿಸಬಹುದು. ಗ್ರಾಮೀಣ ಪ್ರದೇಶಗಳಿಗೆ ಅಗತ್ಯವಿರುವ ಆರೋಗ್ಯ ಸಿಬ್ಬಂದಿ ಅಂತರವನ್ನು ಕಡಿಮೆ ಮಾಡಿ ದುರ್ಗಮ ಪ್ರದೇಶಗಳಿಗೂ ಕೂಡ ಆರೋಗ್ಯ ಸೇವೆಗಳನ್ನು ತಲುಪಿಸಬಹುದು. ರೋಗವನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡುವ ಮೂಲಕ ಹಿಂದುಳಿದ ವರ್ಗವನ್ನು ಸಬಲೀಕರಣಗೊಳಿಸುವುದು ಹೆಲ್ತ್ ಎಟಿಎಂ ಗುರಿಯಾಗಿದೆ ಎಂದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles