ಬೆಂಗಳೂರು: ವಿರೋಧ ಪಕ್ಷಗಳ ʼಇಂಡಿಯಾʼ ಒಕ್ಕೂಟವು ಕೆಲ ಮಾಧ್ಯಮಗಳನ್ನು ಮೇಲೆ ನಿಷೇಧ ಹೇರಿರುವ ವಿಚಾರಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ಪ್ರಧಾನಿ ಮೋದಿ ಹಾಗೂ ಜೆ.ಪಿ.ನಡ್ಡಾ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯ ಟ್ವೀಟ್‌ನಲ್ಲಿ, ಜೆ.ಪಿ.ನಡ್ಡಾ ಅವರೇ, ಮಾಧ್ಯಮಗಳ ಮೇಲಿನ ನೈಜ ದಾಳಿಗಳ ಪಟ್ಟಿ ನಾವು ಕೊಡುತ್ತೇವೆ. ಇದನ್ನೆಲ್ಲ ನೀವು ಮರೆತಿರಬಹುದು, ಆದರೆ “ಇಂಡಿಯಾ” ಮರೆತಿಲ್ಲ ಎಂದಿರುವ ಅವರು, ಸತ್ಯದ ವರದಿ ಮಾಡಿದ್ದಕ್ಕಾಗಿ ಬಂಧನಕ್ಕೊಳಗಾದ ಪತ್ರಕರ್ತರ ಪಟ್ಟಿಯನ್ನು ಉಲ್ಲೇಖಿಸಿದ್ದಾರೆ.


ವಿಶ್ವದ ಪತ್ರಿಕಾ ಸ್ವಾತಂತ್ಯ್ರದಲ್ಲಿ ಭಾರತದ ಸ್ಥಾನ ಕುಸಿಯುತ್ತಿದೆ. 2015ರಲ್ಲಿ 136ನೇ ಸ್ಥಾನ, 2019ರಲ್ಲಿ 140ನೇ ಸ್ಥಾನ, 2022ರಲ್ಲಿ 150ನೇ ಸ್ಥಾನ, 2023ರಲ್ಲಿ 161ನೇ ಸ್ಥಾನಕ್ಕೆ ಇಳಿದಿದೆ. ಪಕ್ಷವೊಂದು ಸುದ್ದಿ ಮಾಧ್ಯಮಕ್ಕೆ ಬರುವುದಿಲ್ಲ, ಚರ್ಚೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬುದು ಅಭಿವ್ಯಕ್ತಿ ಸ್ವಾತಂತ್ಯ್ರದ ಹರಣ ಅಲ್ಲ. ಪ್ರಧಾನಿ ನರೇಂದ್ರ ಮೋದಿ ಕುರಿತಾದ ಬಿಬಿಸಿ ಸಾಕ್ಷ್ಯಚಿತ್ರವನ್ನು ನಿಷೇಧಿಸಿದ್ದು, ನಿಜವಾದ ಅಭಿವ್ಯಕ್ತಿ ಸ್ವಾತಂತ್ಯ್ರದ ಹರಣ ಎಂದು ಟಾಂಗ್ ನೀಡಿದ್ದಾರೆ.
ಇದನ್ನೂ ಓದಿ: ಸಂವಿಧಾನ ಪೀಠಿಕೆ ವಾಚನಕ್ಕೆ ಆಹ್ವಾನ ನೀಡಿದ್ರೂ ಜೆಡಿಎಸ್-ಬಿಜೆಪಿ ಗೈರು: ಸಿಎಂ ವಿಷಾದ
ಒಂದು ಪಕ್ಷದ ತುತ್ತೂರಿಗಳನ್ನು ಬಹಿಷ್ಕರಿಸಿದ್ದೇವೆ: ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಳೆದ ಹತ್ತು ವರ್ಷಗಳಲ್ಲಿ ಒಂದೇ ಒಂದು ಪತ್ರಿಕಾಗೋಷ್ಠಿ ನಡೆಸದೆ, ದೇಶದ ಎಲ್ಲ ಪತ್ರಕರ್ತರನ್ನು ಬಹಿಷ್ಕರಿಸಿರುವಾಗ, ಒಂದು ಪಕ್ಷದ ತುತ್ತೂರಿಗಳಂತೆ ಕಾರ್ಯನಿರ್ವಹಿಸುತ್ತಾ, ಮಾಧ್ಯಮ ಧರ್ಮಕ್ಕೆ ದ್ರೋಹ ಬಗೆಯುತ್ತಿರುವ ಹದಿನಾಲ್ಕು ಪತ್ರಕರ್ತರ ಮೇಲೆ ಬಹಿಷ್ಕಾರ ಹೇರಿದ್ದನ್ನು ಪ್ರಶ್ನಿಸಲು ನಿಮಗೆ ಯಾವ ನೈತಿಕತೆ ಇದೆ ಹೇಳಿ ಎಂದು ಜೆ.ಪಿ.ನಡ್ಡಾ ಅವರಿಗೆ ಪ್ರಶ್ನೆ ಕೇಳಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.