ಬೆಂಗಳೂರು: ಆ ವಿಡಿಯೋದಲ್ಲಿ ನನ್ನ ಪುತ್ರ ಡಾ.ಯತೀಂದ್ರ ಮಾತಾಡಿದ್ದು ಸಿಎಸ್ಆರ್ ಫಂಡಿಂಗ್ ಬಗ್ಗೆ ಎಂದು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಡಾ.ಯತೀಂದ್ರ ಮೊಬೈಲ್ ನಲ್ಲಿ ಮಾತನಾಡಿರುವ ವಿಡಿಯೊ ಮಾಧ್ಯಮಗಳಲ್ಲಿ ತೀವ್ರ ಸುದ್ದಿಯಾಗಿ ವಿರೋಧ ಪಕ್ಷಗಳು ಟೀಕಿಸುತ್ತಿರುವ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಶಾಲೆಗಳನ್ನು ಕಟ್ಟಿಸುತ್ತಿದ್ದೇವೆ. ಅದಕ್ಕೆ ಸಿಎಸ್ಆರ್ ಫಂಡ್ ಒದಗಿಸುವ ಬಗ್ಗೆ ಮಾತನಾಡಿದ್ದಾರೆ ಹೊರತು ವರ್ಗಾವಣೆ ಬಗ್ಗೆ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಹಲೋ ಅಪ್ಪ.. ನಾನು ಕೊಟ್ಟಿರೋ 4-5 ಮಾತ್ರ ಮಾಡಿ: ಸಿಎಂ ಪುತ್ರ ಯತೀಂದ್ರ ವಿಡಿಯೋ ವೈರಲ್
ಇನ್ನು ಮುಂದುವರೆದು ಮಾತನಾಡಿದ ಅವರು, ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಯಾವುದೇ ದಂಧೆ, ಹಗರಣಗಳಲ್ಲಿ ಭಾಗಿಯಾಗಿಲ್ಲ. ಕುಮಾರಸ್ವಾಮಿ ರಾಜಕೀಯಕ್ಕಾಗಿ ಏನೆಲ್ಲಾ ಆರೋಪ ಮಾಡಬಹುದು, ಮಾಡಿಕೊಳ್ಳಲಿ, ಕುಮಾರಸ್ವಾಮಿ ಆರೋಪಗಳ ಬಗ್ಗೆ ಬೇಕಾದರೆ ತನಿಖೆ ಮಾಡಿಕೊಳ್ಳಲಿ, ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಸವಾಲು ಹಾಕಿದ್ದಾರೆ.
ಘಟನೆ ಹಿನ್ನೆಲೆ:
ಬುಧವಾರ ಯತೀಂದ್ರ ಅವರು ವರುಣ ಕ್ಷೇತ್ರ ವ್ಯಾಪ್ತಿಯ ಮೈಸೂರು ತಾಲೂಕಿನ ಚಟ್ನಹಳ್ಳಿಪಾಳ್ಯ ಗ್ರಾಮದಲ್ಲಿ ಸಾರ್ವಜನಿಕ ಕುಂದುಕೊರತೆ ವಿಚಾರಣೆ ಸಭೆ ನಡೆಸಿ ಗ್ರಾಮದ ಜನರ ಅಹವಾಲು ಸ್ವೀಕರಿಸುತ್ತಿದ್ದರು.
ಈ ವೇಳೆ ಅವರು ತಂದೆಗೆ ಕರೆ ಮಾಡಿದ್ದಾರೆ. ಯಾವುದೋ ವಿಷಯವನ್ನು ಪ್ರಸ್ತಾಪ ಮಾಡಿದ ಅವರು, ನಾನು ನೀಡಿದ ಲಿಸ್ಟ್‌ನದ್ದು ಮಾತ್ರ ಮಾಡಿ ಎಂದು ಸಾರ್ವಜನಿಕರ ಮುಂದೆಯೇ ತಾನು ನೀಡಿದ ಪಟ್ಟಿಯ ಬಗ್ಗೆ ಮಾತುಕತೆ ಮಾಡಿದ್ದಾರೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಡಿ.4 ರಿಂದ 10 ದಿನಗಳ ಕಾಲ ಚಳಿಗಾಲದ ಅಧಿವೇಶನ
ಆರಂಭದಲ್ಲಿ ಅಪ್ಪ ಹೇಳಿ ಅಂತಾ ಯತೀಂದ್ರ ಸಿದ್ದರಾಮಯ್ಯ ಮಾತು ಶುರುಮಾಡಿದ್ದಾರೆ. ಈ ವೇಳೆ “ವಿವೇಕಾನಂದ ಯಾರು?” ಎಂದು ಸಿಎಂ ಪ್ರಶ್ನೆ ಕೇಳಿದ್ದಾರೆ. ಆಗ ಯತೀಂದ್ರ, ಆ ಮಹದೇವ ಅವರಿಗೆ ಪೋನ್ ನೀಡುವಂತೆ ಸಿಎಂಗೆ ಹೇಳುತ್ತಾರೆ.
ಮಹದೇವ್‌ಗೆ ಫೋನ್ ಕೊಟ್ಟ ತಕ್ಷಣ ಅವರನ್ನು ತರಾಟೆ ತೆಗೆದುಕೊಂಡ ಯತೀಂದ್ರ, ನಾನು ಕೊಟ್ಟಿದ್ದು ಬಿಟ್ಟು ಬೇರೆ ಯಾವುದು ಅದು ಅಂತಾ ಪ್ರಶ್ನಿಸಿದ್ದಾರೆ. ನನಗೆ ಅದೆಲ್ಲಾ ಗೊತ್ತಿಲ್ಲ. ನಾನು ಕೊಟ್ಟಿರುವ ನಾಲ್ಕು, ಐದು ಮಾತ್ರ ಮಾಡುವಂತೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.