ಬೆಂಗಳೂರು: ಕೇಂದ್ರ ಸರ್ಕಾರ ರಾಖಿ ಹಬ್ಬ ಪ್ರಯುಕ್ತ ಎಲ್‌ಪಿಜಿ ಸಿಲಿಂಡರ್ ಮೇಲೆ 200 ರೂಪಾಯಿ ಸಬ್ಸಿಡಿ ಘೋಷಿಸಿದೆ. ಕೇಂದ್ರದ ಈ ಕ್ರಮದ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಪ್ರಧಾನಿ ಮೋದಿಗೆ ಸರಣಿ ಪ್ರಶ್ನೆ ಮುಂದಿಟ್ಟಿದ್ದಾರೆ.
ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರೆ, ನಿಮ್ಮ ನೇತೃತ್ವದ ಕೆಂದ್ರ ಸರ್ಕಾರವು ಬಹಳಷ್ಟು ಮೀನಮೇಷ ಎಣಿಸಿದ ನಂತರ ಅಂತಿಮವಾಗಿ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ರೂ.200 ಕಡಿಮೆ ಮಾಡಿ ಘೋಷಣೆ ಮಾಡಿದೆ. ಆದರೆ, ಮೇಲುನೋಟಕ್ಕೆ ಇದರಲ್ಲಿ ಕೇಂದ್ರದ ಪಾಲು ಏನೂ ಇಲ್ಲ ಎನ್ನುವುದು ನಿಚ್ಚಳಗೊಂಡಿದೆ. ‘ಕಾರ್ಪೊರೆಟ್ ಹೊಣೆಗಾರಿಕೆ’ಯ ರೀತಿ ತೈಲ ಕಂಪೆನಿಗಳೇ ಈ ವೆಚ್ಚವನ್ನು ಭರಿಸಲಿವೆ ಎಂದು ನಿಮ್ಮದೇ ಮಂತ್ರಿಮಂಡಲದ ಸಚಿವರು ಹೇಳುವ ಮೂಲಕ ಅದನ್ನು ಒಪ್ಪಿಕೊಂಡಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ: ‘ದಲಿತ ಸಂಘಟನೆಗಳೆಲ್ಲಾ ಒಗ್ಗಟ್ಟಾಗಿರಬೇಕು; ಒಟ್ಟಿಗೆ ಹೋರಾಟ ಮಾಡಿದ್ರೆ ಸಂತೋಷ’
ಅಡುಗೆ ಅನಿಲ ದರ ನಿಗದಿಗೆ ಆಧಾರವಾದ ಅಂತಾರಾಷ್ಟ್ರೀಯ ಮಾರುಕಟ್ಟೆಯ ‘ಸೌದಿ ಸಿಪಿ’ ದರ ಪ್ರತಿ ಟನ್‌ಗೆ ಈ ಆರ್ಥಿಕ ವರ್ಷಾರಂಭದಲ್ಲಿ 732 ಡಾಲರ್ ಇದ್ದದ್ದು, ಈಗ 385 ಡಾಲರ್‌ಗೆ ಕುಸಿದಿದೆ. ಅಂದರೆ ಶೇ.48ರಷ್ಟು ಇಳಿಕೆಯಾಗಿದೆ. ಸಿಲಿಂಡರ್ ದರವೂ ಹೆಚ್ಚು ಕಡಿಮೆ ಅರ್ಧದಷ್ಟು ಇಳಿಕೆ ಮಾಡಬೇಕಿತ್ತಲ್ಲವೇ? ಆದರೆ, ಕೇಂದ್ರ ಸರ್ಕಾರ ಇಳಿಕೆ ಮಾಡಿರುವುದು ಪ್ರತಿ ಸಿಲಿಂಡರ್‌ಗೆ ರೂ. 200 ಮಾತ್ರ, ಯಾಕೆ? ಎಂದು ಪ್ರಶ್ನೆ ಮಾಡಿದ್ದಾರೆ.
ಅವರೇ, ಜನರ ಮೇಲಿನ ಬೆಲೆ ಏರಿಕೆಯ ಹೊರೆ ಇಳಿಸುವ ಪ್ರಾಮಾಣಿಕ ಉದ್ದೇಶ ಕೇಂದ್ರ ಸರ್ಕಾರ ಹೊಂದಿದ್ದರೆ ಪ್ರತಿ ಸಿಲಿಂಡರ್‌ನ ಬೆಲೆಯನ್ನು ಕನಿಷ್ಠ ರೂ.500-600ರಷ್ಟು ಇಳಿಸಬೇಕಾಗಿದೆ. ಇದೇ ರೀತಿ ಡೀಸೆಲ್-ಪೆಟ್ರೋಲ್ ಬೆಲೆಯನ್ನು ರೂ.60-70ಕ್ಕೆ ಇಳಿಸಬೇಕಾಗುತ್ತದೆ. ಇದನ್ನು ಮಾಡದೆ ಇದ್ದರೆ ಇದೊಂದು ಕಣ್ಣೊರೆಸುವ ತಂತ್ರ, ಚುನಾವಣಾ ಗಿಮಿಕ್, ಬಾಯಿ ಬಡಾಯಿ ಎಂದು ಹೇಳಬೇಕಾಗುತ್ತದೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಸಕ್ಕರೆ ನಾಡು ಮಂಡ್ಯಕ್ಕೆ ಭೇಟಿ ನೀಡಲಿರುವ ಬರಾಕ್ ಒಬಾಮಾ
ಜಾಗತಿಕವಾಗಿ ಅನಿಲ ಬೆಲೆಯಲ್ಲಿ ಅಪಾರ ಇಳಿಕೆಯಾದಾಗಲೂ ಜನರ ಹಿತಾಸಕ್ತಿಯನ್ನು ರಕ್ಷಿಸದ ಕೇಂದ್ರ ಸರ್ಕಾರ ಬದಲಿಗೆ ತೈಲೋತ್ಪನ್ನ ಕಂಪೆನಿಗಳಿಗೆ ಅಪಾರ ಪ್ರಮಾಣದ ಲಾಭ ಮಾಡಿಕೊಳ್ಳಲು ಅವಕಾಶ ಕಲ್ಪಿಸಿತ್ತು. ಈಗಲೂ ಸಹ ಅನಿಲ ಬೆಲೆಯನ್ನು ಕೇವಲ ರೂ. 200 ಮಾತ್ರವೇ ಇಳಿಕೆ ಮಾಡಿ ತೈಲೋತ್ಪನ್ನ ಕಂಪೆನಿಗಳಿಗೆ ಲಾಭ ಮಾಡಿಕೊಳ್ಳಲು ಅವಕಾಶ ನೀಡಿದೆ. ಇದರಲ್ಲಿ, ಜನರ ಹಿತಾಸಕ್ತಿ ಎಲ್ಲಿ ಅಡಗಿದೆ ಪ್ರಧಾನಿ ಮೋದಿ ಅವರೇ ಎಂದಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.