ಬೆಂಗಳೂರು : ಸೋಮಣ್ಣ ವಿಚಾರದಲ್ಲಿ ಗೊಂದಲ ಇಲ್ಲ, ಟಿಕೆಟ್ ಹಂಚಿಕೆ ವೇಳೆ ಎಲ್ಲರ ಹೆಸರು ಚರ್ಚಿಸಲಾಗುವುದು ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ಇಲ್ಲಿ ಯಾರು ಯಾರನ್ನೂ ಕಡೆಗಣಿಸುವ ಪ್ರಶ್ನೆ ಇಲ್ಲ. ಎಲ್ಲರೂ ಪಕ್ಷಕ್ಕಾಗಿ ಕೆಲಸ ಮಾಡಬೇಕು. ಬೇರೆ ವಿಚಾರಕ್ಕೆ ನಾನು ತಲೆಕೆಡಿಸಿಕೊಂಡಿಲ್ಲ. ಗೆಲ್ಲುವಂತಹ ಅವಕಾಶ ಜಾಸ್ತಿ ಇರೋದ್ರಿಂದ ಅಭ್ಯರ್ಥಿಗಳ ಸಂಖ್ಯೆ ಜಾಸ್ತಿ ಇದೆ. ಹೀಗಾಗಿ ಟಿಕೆಟ್ ಬಗ್ಗೆ ಚರ್ಚೆ ಆಗುತ್ತದೆ ಎಂದು ಸ್ಪಷ್ಟೀಕರಣ ನೀಡಿದರು.
ಸಚಿವ ಸೋಮಣ್ಣ ಅಸಮಾಧಾನ ವಿಚಾರ ಕುರಿತು ದೆಹಲಿಯಲ್ಲಿ ಹೈಕಮಾಂಡ್ ಅವರನ್ನು ಕರೆಸಿ ಮಾತನಾಡಿದ್ದಾರೆ. ನಮ್ಮಲ್ಲಿ ಯಾವುದೇ ಅಸಮಾಧಾನ ಇಲ್ಲ ಎಂದು ಹೇಳಿದರು. ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಕೂಡ ಕೆಲಸ ಮಾಡುತ್ತಿದ್ದಾರೆ. ಸೋಮಣ್ಣ ಕೂಡ ಕೆಲಸ ಮಾಡುತ್ತಿದ್ದಾರೆ. ಟಿಕೆಟ್ ವಿಚಾರದಲ್ಲಿ ಎಲ್ಲವೂ ಚರ್ಚೆ ಆಗುತ್ತದೆ. ಹೈಕಮಾಂಡ್ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದರು.
ಸೋಮಣ್ಣ ಅಮಿತ್ ಶಾ ಭೇಟಿ ನಂತರ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಮತ್ತು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರನ್ನೂ ಭೇಟಿಯಾಗಿದ್ದಾರೆ. ಅಷ್ಟೇ ಅಲ್ಲದೇ ಬಂದ ಕೆಲಸ ಆಯಿತು ಎಂದು ಖುಷಿಯಿಂದ ಸೋಮಣ್ಣ ಹಂಚಿಕೊಂಡಿದ್ದು, ಅಮೀತ್ ಷಾ ಸಮಸ್ಯೆ ಬಗೆಹರಿಸೋ ಭರವಸೆ ನೀಡಿದ್ದಾರೆ ಎನ್ನಲಾಗಿದೆ.