ಬೆಂಗಳೂರು: ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಸಂಬಂಧ ಚರ್ಚೆ ನಡೆಸಲು ಇಂದು ಸಂಜೆ ದೆಹಲಿಗೆ ಹೋಗುತ್ತಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ,ಗಡಿ ವಿವಾದದ ಬಗ್ಗೆ ಇಲ್ಲಿಯವರೆಗೆ ನಡೆದಿರುವುದರ ಬಗ್ಗೆ ಚರ್ಚೆ ಮಾಡಿದ್ದೇವೆ. ಇಂದು ಸಂಜೆ ದೆಹಲಿಗೆ ಹೋಗಲಿದ್ದು, ಕರ್ನಾಟಕ ಮಹಾರಾಷ್ಟ್ರದ ಗಡಿ ವಿವಾದದ ಸಾಧಕ-ಬಾಧಕಗಳ ಕುರಿತು ಚರ್ಚೆ ನಡೆಸುತ್ತೇನೆ ಎಂದರು.
ಸಮಯಾವಕಾಶ ಸಿಕ್ಕಲ್ಲಿ ರಾಜ್ಯ ರಾಜಕಾರಣದ ಕುರಿತು ಹೈಕಮಾಂಡ್ ನಾಯಕರ ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ ಎಂದು ತಿಳಿಸಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನ ಭೇಟಿಯಾಗುವ ಸಾಧ್ಯತೆ ಇದೆ. ಸಮಯ ಕೇಳಿದ್ದೇನೆ, ಅವರಿನ್ನೂ ಸಮಯ ಕೊಟ್ಟಿಲ್ಲ. ಅವರು ಸಮಯ ಕೊಡುತ್ತಾರೆ ಎನ್ನುವ ವಿಶ್ವಾಸವಿದೆ. ನಡ್ಡಾ ನಂತರ ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಭೇಟಿ ಮಾಡಬೇಕೆಂದುಕೊಂಡಿದ್ದೇನೆ ಎಂದರು.
ಸುಪ್ರೀಂ ಕೋರ್ಟ್ನಲ್ಲಿ ನವೆಂಬರ್ 30 ರಂದು ಗಡಿ ವಿವಾದ ಕುರಿತ ಪ್ರಕರಣದ ಅರ್ಜಿ ವಿಚಾರಣೆಗೆ ಬರಲಿದೆ. ಹಾಗಾಗಿ ಪ್ರಕರಣ ಕುರಿತು ನಮ್ಮ ಹಿರಿಯ ವಕೀಲ ಮುಕುಲ್ ರಹೊಟೊಗಿ ಅವರನ್ನು ಭೇಟಿಯಾಗುತ್ತೇನೆ. ರಾಜ್ಯದ ಮಾಹಿತಿ ನೀಡಿ ಚರ್ಚಿಸಲಾಗುತ್ತದೆ ಎಂದರು.
ನನಗೆ ರಾಜಕೀಯ ಒತ್ತಡ ಇರುವುದು ಸತ್ಯ. ನಾನು ಎಲ್ಲಾ ಪಕ್ಷಗಳ ಹಿತ ಕಾಯಬೇಕಿದೆ, ಆ ಕಾರಣಕ್ಕೆ ಎಲ್ಲಾ ರೀತಿಯಲ್ಲೂ ಆಲೋಚನೆ ಮಾಡಬೇಕಾಗುತ್ತದೆ ಎಂದು ಹೇಳಿದರು.ನ. 30 ರಂದು ಮಹಾರಾಷ್ಟ್ರ ಗಡಿ ವಿಚಾರದ ತೀರ್ಪು ಬರಲಿದ್ದು, ಆ ತೀರ್ಪಿನ ಸಾಧಕ-ಬಾಧಕಗಳ ಬಗ್ಗೆ ಪೂರ್ವ ಚರ್ಚೆ ನಡೆಸುತ್ತೇನೆ. ಜೊತೆಗೆ ಬೇರೆ ವಿಚಾರಗಳ ಕುರಿತು ಚರ್ಚಿಸಲಾಗುವುದು ಎಂದು ಹೇಳಿದರು.