ಹಾವೇರಿ: ನಾನು ರಾಜ್ಯಾದ್ಯಂತ ಪ್ರವಾಸ ಮಾಡಿದ್ದೇನೆ. ಈ ಬಾರಿ ಬಿಜೆಪಿಯ ಗೆಲುವು ನಿಶ್ಚಿತವಾಗಿದೆ. ಈ ಬಾರಿ ಅತಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿಕೊಡಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಶಿಗ್ಗಾಂವಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿ ಮಾತನಾಡಿ, ಈ ಬಾರಿ ಚುನಾವಣೆಯನ್ನು ನಾವ್ಯಾರೂ ಮಾಡುತ್ತಿಲ್ಲ. ಜನರೇ ಸ್ವಯಂ ಪ್ರೇರಿತರಾಗಿ ಪ್ರಚಾರ ಮಾಡುತ್ತಿದ್ದಾರೆ. ಎಲ್ಲಾ ಹಳ್ಳಿಗಳಲ್ಲಿ ಹಬ್ಬದ ವಾತಾವರಣವಿದೆ. ವಿಶೇಷವಾಗಿ ತಾಯಂದಿರ ಉತ್ಸಾಹ, ಬೆಂಬಲ ನೋಡಿದರೆ ಯಾವುದೋ ಜನ್ಮದ ಪುಣ್ಯ ಅಂದುಕೊಂಡಿದ್ದೇನೆ ಎಂದರು.
ಈ ಬಾರಿಯ ಚುನಾವಣೆ ಬಿಜೆಪಿಯ ಅಭಿವೃದ್ಧಿ ಹಾಗೂ ಕಾಂಗ್ರೆಸ್‌ನ ಒಡೆದು ಆಳುವ ನೀತಿಯ ನಡುವೆ ನಡೆಯುತ್ತಿದೆ, ಪ್ರಧಾನಿ ನರೇಂದ್ರ ಮೋದಿ ಯವರಂಥ ನಾಯಕ ಸಿಕ್ಕಿರೋದು ನಮ್ಮ ಸೌಭಾಗ್ಯ. ಕೊರೊನಾ ಸಂದರ್ಭದಲ್ಲಿ ಪರಿಹಾರ ನೀಡಿದ್ದಾರೆ, ಆರೋಗ್ಯ ರಕ್ಷಿಸಿ ದೇಶ ರಕ್ಷಿಸಿದ್ದಾರೆ. ದೇಶವು ಆರ್ಥಿಕ ಪ್ರಗತಿ ಆಗಿದೆ, 2018ರಲ್ಲಿ ನೀವು ಕೊಟ್ಟಿರುವ ಮತದ ಶಕ್ತಿ ಬಹಳ ದೊಡ್ಡದಿದೆ ಎಂದು ತಿಳಿಸಿದರು.
ನಾನು ಶಾಸಕ, ಮಂತ್ರಿ ಹಾಗೂ ಸಿಎಂ ಕೂಡ ಆಗಿದ್ದೇನೆ. ಬಿಜೆಪಿ ಸರ್ಕಾರ ಸಾಕಷ್ಟು ಅಭಿವೃದ್ಧಿ ಮಾಡಿದೆ, ನನ್ನ ಕ್ಷೇತ್ರದಲ್ಲಿ ಸುಮಾರು 300 ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡಿದ್ದೇನೆ. ನಮ್ಮ ಕ್ಷೇತ್ರದಲ್ಲಿ ಐಟಿಐ ನಿರ್ಮಾಣ ಮಾಡಿದ್ದೇನೆ ಎಂದರು.