ಬೆಂಗಳೂರು: ನಗರದಲ್ಲಿ ಮಳೆಗೆ ಯುವತಿಯ ಸಾವಾಗಿರುವುದು ಬಹಳ ನೋವಿನ ಸಂಗತಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದರೂ ಬಿಬಿಎಂಪಿಯವರು ಈ ವರ್ಷ ಮುಂಜಾಗ್ರತೆ ಕ್ರಮ ತೆಗೆದುಕೊಂಡಿಲ್ಲ ಅನ್ನೋದು ಸ್ಪಷ್ಟವಾಗಿದ್ದು,ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಘಟನೆ ನಡೆಯೋದಿಕ್ಕೆ ಅವಕಾಶ ಕೊಟ್ಟಂತಾಗಿದೆ, ಘಟನೆ ನಡೆದ ಕೂಡಲೇ ಧಾವಿಸಿ ರಕ್ಷಣೆ ಮಾಡುವ ಕೆಲಸ ಬಿಬಿಎಂಪಿಯವ್ರು ಮಾಡಲಿಲ್ಲ ಎಂದು ಆರೋಪ ಮಾಡಿದರು.
ನಾವು ಬೆಂಗಳೂರಿನಲ್ಲಿ ಎಸ್‌ಡಿಆರ್‌ಎಫ್ ತಂಡಗಳನ್ನು ರಚಿಸಿದ್ದೇವೆ. ಈ ತಂಡಗಳಿಗೆ ಚಾಲನೆ ಕೊಟ್ಟು ಕೆಲಸಕ್ಕೆ ಹಚ್ಚುವ ಕೆಲಸ ಆಗಬೇಕು. ಇನ್ನೂ ಐದು ದಿನ ಮಳೆ ಆಗಲಿದೆ ಎಂಬ ಮುನ್ಸೂಚನೆ ಇದೆ. ವ್ಯವಸ್ಥಿತವಾಗಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ನಗರದಲ್ಲಿ ಸಿಕ್ಕಾಪಟ್ಟೆ ಮರಗಳು ಬಿದ್ದಿದ್ದು, ಬಿದ್ದ ಮರಗಳನ್ನು ತೆರವುಗೊಳಿಸುವ ಕೆಲಸ ಆಗಿಲ್ಲ ಎಂದರು.
ಮುಂದಿನ ಐದು ದಿನ ಹೀಗೇ ಬಿಟ್ಟರೆ ಬೆಂಗಳೂರು ಬಹಳ ಅಸ್ತವ್ಯಸ್ತ ಆಗಲಿದೆ. ಪರಿಹಾರ ಕ್ರಮಗಳನ್ನು ಆದ್ಯತೆಯಿಂದ ಸಿಎಂ ಮಾಡಬೇಕಿದೆ. ಬಿಬಿಎಂಪಿ ಅಧಿಕಾರಿಗಳು ಕೆಲಸ ಮಾಡೋರು ಮಾಡ್ತಾರೆ, ಮಾಡದಿರೋರು ಮಾಡಲ್ಲ. ಪ್ಲಾನ್ ಪ್ರಕಾರ ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಹೇಳಿದರು. ಇನ್ನೂ ಸಿಎಂ ಸಿದ್ದರಾಮಯ್ಯ ಮಹಿಳೆಯ ಕುಟುಂಬಸ್ಥರಿಗೆ 5 ಲಕ್ಷ ಪರಿಹಾರ ನೀಡೋದಾಗಿ ತಿಳಿಸಿದ್ದಾರೆ.