ಹುಬ್ಬಳ್ಳಿ: ಯಾರು ಬೇಕಾದರೂ ಬನ್ನಿ, ಶಿಗ್ಗಾಂವಿಯಲ್ಲಿ ಹೋರಾಡಲು ಸಿದ್ಧ ಎಂದು ಕಾಂಗ್ರೆಸ್‌ಗೆ ಸಿಎಂ ಬೊಮ್ಮಾಯಿ ಸವಾಲು ಹಾಕಿದರು.
ಶಿಗ್ಗಾಂವಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ನಾನು ಶಿಗ್ಗಾಂವಿಯಿಂದಲೇ ಸ್ಪರ್ಧಿಸುತ್ತಿದ್ದು, ಕೆಲವರು ಇನ್ನೂ ಕ್ಷೇತ್ರದ ಹುಡುಕಾಟದಲ್ಲಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯವಾಡಿದರು.
ಶಿಗ್ಗಾಂವಿಯ ಕುಸ್ತಿ ಅಖಾಡಕ್ಕೆ ಯಾರು ಬೇಕಾದರೂ ಬನ್ನಿ, ನಾನು ಸಿದ್ದನಿದ್ದೇನೆ, ಅವಿರೋಧ ಆಯ್ಕೆ ನನಗಿಷ್ಟವಿಲ್ಲ, ನನಗೆ ಕುಸ್ತಿ ಬೇಕು, ಸೆಡ್ಡು ಹೊಡೆದಾಗಲೇ ಯಾರ ಶಕ್ತಿ ಎಷ್ಟು ಎನ್ನುವುದು ಗೊತ್ತಾಗಲಿದೆ. ಕುಸ್ತಿಗೆ ಬರುವಾಗ ಹೊಸ ಪಟುಗಳನ್ನು ಪ್ರಾಕ್ಟೀಸ್ ಮಾಡಿಕೊಂಡು ಬನ್ನಿ ಎಂದು ಸವಾಲ್ ಹಾಕಿದರು.
ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ 60 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಭ್ಯರ್ಥಿಗಳಿಲ್ಲ. ಹೀಗಾಗಿ ಅಲ್ಲೊಬ್ಬ ಇಲ್ಲೊಬ್ಬ ಎಂದು ನಾಯಕರನ್ನು ಆಹ್ವಾನಿಸುತ್ತಿದ್ದಾರೆಂದು ಸಿಎಂ ವ್ಯಂಗ್ಯವಾಡಿದ್ದಾರೆ. ಅಪಪ್ರಚಾರಗಳ ನಡುವೆಯೂ ಶಿಗ್ಗಾಂವಿ ಜನತೆ ಸದಾ ಒಳ್ಳೆಯದನ್ನು ಗುರುತಿಸಿ ನನ್ನ ಬೆನ್ನಿಗೆ ನಿಂತಿದ್ದಾರೆ, ಮತದಾರರ ಮೇಲೆ ನನಗೆ ವಿಶ್ವಾಸವಿದೆ. ಹೀಗಾಗಿ ಶಿಗ್ಗಾಂವಿಯಲ್ಲಿ ಸ್ಪರ್ಧಿಸುತ್ತೇನೆಂದು ಸ್ಪಷ್ಟಪಡಿಸಿದರು.