ಬೆಳಗಾವಿ: ಕಾಂಗ್ರೆಸ್‌ನವರು ಗ್ಯಾರಂಟಿ ಕಾರ್ಡ್ ವಿತರಿಸುತ್ತಿದ್ದಾರೆ, ಅವರದ್ದೇ ಅವರಿಗೆ ಗ್ಯಾರಂಟಿ ಇಲ್ಲ. ಇನ್ನು ಕಾರ್ಡ್ ತೆಗೆದುಕೊಂಡು ಉಪ್ಪಿನಕಾಯಿ ಹಾಕಬೇಕೇ ಎಂದು ಸಿಎಂ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೂ ಬರಲ್ಲ, ಅವರು ನೀಡಿದ ಭರವಸೆ ಅನುಷ್ಠಾನವೂ ಆಗುವುದಿಲ್ಲ. ಕೇವಲ ಜನರನ್ನು ಮರಳು ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಟೀಕಿಸಿದರು.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೊಮ್ಮೆ ಸಂಪೂರ್ಣ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ರಾಜ್ಯದಲ್ಲಿ ಬಿಜೆಪಿ ಸಂಘಟನೆ ಗಟ್ಟಿಯಾಗಿದೆ. ಪಕ್ಷದ ಕಾರ್ಯಕರ್ತರಲ್ಲಿ ಬಹಳಷ್ಟುಉತ್ಸಾಹವಿದೆ. ಬಿಜೆಪಿ ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರ ಹಿಡಿಯಲಿದೆ ಎಂದರು.
ಮಾ.20ರಂದು ರಾಹುಲ್ ಗಾಂಧಿ ಭೇಟಿ ನೀಡುತ್ತಿರುವುದರಿಂದ ಯಾವುದೇ ಪರಿಣಾಮ ಆಗದು. ರಾಹುಲ್ ಗಾಂಧಿ ಬರುತ್ತಾರೆ, ಹೋಗುತ್ತಾರೆ ಅಷ್ಟೆ ಎಂದು ಹೇಳಿದರು. ಸಹಕಾರಿ ರಂಗದಲ್ಲಿ ಎಲ್ಲರೂ ಸಮಾನರು. ಜನರಿಗೆ ಸಹಕಾರಿ ಸಾಹುಕಾರರು ಬೇಡ , ಸಹಕಾರಿಗಳು ಮಾತ್ರ ಇರಬೇಕು ಎಂದರು. ಕಾಂಗ್ರೆಸ್ ಭ್ರಷ್ಟಾಚಾರದಿಂದ ತುಂಬಿರುವ ಪಕ್ಷ, ಬಿಜೆಪಿ ವಿರುದ್ಧ ಕಾಂಗ್ರೆಸ್ ಆಟ ನಡೆಯೋದಿಲ್ಲ ಎಂದು ಕಿಡಿಕಾರಿದರು.