ಬೆಳಗಾವಿ: ಕಾಂಗ್ರೆಸ್ ಸರ್ಕಾರದಲ್ಲಿ ಸಿದ್ದರಾಮಯ್ಯನವರ ಅವಧಿಯಲ್ಲಿ ಅಭಿವೃದ್ಧಿ ಆಗಲ್ಲ, ಅವರಿಗೆ ಮಾತಾಡುವುದೇ ಕೆಲಸ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಳಗಾವಿ ಜಿಲ್ಲೆಯ ರಾಜಹಂಸಗಡ ಕೋಟೆಯಲ್ಲಿ ನಿರ್ಮಿಸಿರುವ ಶಿವಾಜಿ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿವಾಜಿ ಈ ದೇಶ ಕಂಡ ಅಪ್ರತಿಮ ನಾಯಕ. ಬೆಳಗಾವಿಯ ರಾಜಹಂಸಗಡ ಕೋಟೆಯಲ್ಲಿ ಶಿವಾಜಿ ಪ್ರತಿಮೆ ಅನಾವರಣ ಮಾಡಲಾಗಿದೆ. ಗಾರ್ಡನ್, ಕೋಟೆ ನವೀಕರಣ, ನೀರಿನ ವ್ಯವಸ್ಥೆ ಸೇರಿದಂತೆ ಹಲವು ಕಾರ್ಯಕ್ರಮ ಉದ್ಘಾಟಿಸಲಾಗಿದೆ, ದೇಶ ಕಾಪಾಡಲು ಮೊಟ್ಟ ಮೊದಲು ಹೋರಾಟ ಮಾಡಿದ್ದು ಶಿವಾಜಿ ಎಂದು ತಿಳಿಸಿದರು.
ರಾಜಹಂಸಗಡ ಶಿವಾಜಿ ಮಹಾರಾಜರು ಕಟ್ಟಿದ ಕೋಟೆ. ಅಭಿವೃದ್ಧಿಗಾಗಿ 2008ರಲ್ಲೇ ಅನುದಾನ ನೀಡಿದ್ದರು. 2008ರಲ್ಲೇ 4.5 ಕೋಟಿ ರೂಪಾಯಿ ಬಿಡುಗಡೆ ಆಗಿತ್ತು. ಕೋಟೆ ಅಭಿವೃದ್ಧಿಗೆ ಹೆಚ್ಚುವರಿಯಾಗಿ 5 ಕೋಟಿ ಅನುದಾನ ಕೊಡುತ್ತೇನೆ ಎಂದು ಇದೇ ವೇಳೆ ಘೋಷಿಸಿದರು.
3.5 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ 50 ಅಡಿ ಎತ್ತರದ ಶಿವಾಜಿ ಪ್ರತಿಮೆ ಎದುರು ನಗಾರಿ ಬಾರಿಸಿ ಸಿಎಂ ಬೊಮ್ಮಾಯಿ ಪ್ರತಿಮೆಗೆ ಹೂವು ಸಮರ್ಪಿಸಿದ್ದಾರೆ.