ಹುಬ್ಬಳ್ಳಿ: ಪ್ರತಿಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕುತ್ತಿದ್ದು, ಜೇನು ನೊಣಗಳಿಂದ ಕಚ್ಚಿಸಿಕೊಂಡರೂ ನಾನು ಜೇನು ಸಿಹಿ ಹಂಚುವ ಕೆಲಸ ಮಾಡಿದ್ದೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಒಳ ಮೀಸಲಾತಿ ವಿಚಾರವಾಗಿ ಪ್ರತಿಕ್ರಿಯಿಸಿ, ನಮಗೆ ಬದ್ಧತೆ ಇದೆ. ಹೀಗಾಗಿ ಇದರ ಬಗ್ಗೆ ಅಧ್ಯಯನ ಮಾಡಿ, ಸಚಿವ ಸಂಪುಟ ಉಪ ಸಮಿತಿ ರಚಿಸಿ, ಕಾನೂನು ಪ್ರಕಾರ ಮಾಡಿದ್ದೇವೆ ಎಂದು ವಿರೋಧ ಪಕ್ಷದವರಿಗೆ ತಿರುಗೇಟು ನೀಡಿದರು.
ನಾವು ಮಾಡಲು ಆಗದ್ದನ್ನು ಬಿಜೆಪಿಯವರು ಮಾಡಿದ್ದಾರೆ ಅಂತ ಕಾಂಗ್ರೆಸ್ನವರು ಹತಾಶೆಯಿಂದ ಮಾತನಾಡುತ್ತಿದ್ದಾರೆ. ಆದರೆ ಅದ್ಯಾವುದಕ್ಕೂ ಬೆಲೆ ಇಲ್ಲ. ಅವರು ಯಾವಾಗಲೂ ಎಸ್ಸಿ ಎಸ್ಟಿ ಸಮುದಾಯದವರನ್ನು ಯಾಮಾರಿಸಿಕೊಂಡೇ ಬಂದಿದ್ದರು ಎಂದು ಟೀಕಿಸಿದರು.
ಇನ್ನು ಬೊಮ್ಮಾಯಿ ಶಕುನಿಯ ಹಾಗೆ ಎಂಬ ಕಾಂಗ್ರೆಸ್ ನಾಯಕ ರಂದೀಪ್ ಸಿಂಗ್ ಸುರ್ಜೆವಾಲಾ ಹೇಳಿಕೆಗೆ ಪ್ರತಿಕ್ರಿಯಿಸಿ ಶಕುನಿಯಾರು, ದುರ್ಯೋಧನ ಯಾರು ಎಂದು ಜನತೆಗೆ ಗೊತ್ತಿದೆ ಎಂದು ಸಿಎಂ ಪ್ರತಿಕ್ರಿಯಿಸಿದ್ದಾರೆ. ಜೇನು ಗೂಡಿಗೆ ಕೈ ಹಾಕದೇ ಇದ್ದಲ್ಲಿ ಜೇನು ಸಿಗಲ್ಲ ಅಂತ ಗೊತ್ತಿತ್ತು, ನಾನು ಜೇನುಗೂಡಿಗೆ ಕೈ ಹಾಕುತ್ತೇನೆ, ಜೇನು ನೊಣದಿಂದ ಕಚ್ಚಿಸಿಕೊಂಡರೂ ಪರ್ವಾಗಿಲ್ಲ ಆ ಜನಾಂಗಕ್ಕೆ ಜೇನಿನ ಹನಿ ಕೊಡಿಸಲು ಸಿದ್ಧ ಅಂದಿದ್ದೆ, ಈಗ ಅದನ್ನು ಮಾಡಿದ್ದೇನೆ ಎಂದರು.