ಬಾಗಲಕೋಟೆ: ಮುಧೋಳದ ಬೀಳಗಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಾದ್ರೂ ನನ್ನನ್ನು ನಿರಾಣಿಯವರು ಕರೆದುಕೊಂಡು ಹೋಗಿಲ್ಲ, ಪರವಾಗಿಲ್ಲ ನಾನು ಮತ್ತೆ ಮುಖ್ಯಮಂತ್ರಿಯಾಗಿ ಬೀಳಗಿಗೆ ಬರುತ್ತೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಮುಧೋಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಸಚಿವ ಮುರುಗೇಶ್ ನಿರಾಣಿಯವರನ್ನು ನಗು ನಗುತ್ತಲೇ ಕಾಲೆಳೆದರು. ನನ್ನನ್ನು ಕರೆದುಕೊಂಡು ಹೋದರೆ ಅಭಿವೃದ್ಧಿ ಚಟುವಟಿಕೆಗಳ ಬಗ್ಗೆ ನನಗೆ ಗೊತ್ತಾಗಬಹುದು ಎಂದು ಅವರು ಕರೆದೊಯ್ದಿಲ್ಲ , ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ ನಾನೇ ಸಿಎಂ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ನವರಂತೆ ನಮ್ಮದು ಬೋಗಸ್ ಗ್ಯಾರಂಟಿ ಅಲ್ಲ. ನಿಮ್ಮ ಅವಧಿಯಲ್ಲಾದ ಅಭಿವೃದ್ಧಿ ಕೆಲಸಗಳ ಪಟ್ಟಿ ಬಿಡುಗಡೆ ಮಾಡಿ. ನಮ್ಮ ಅವಧಿಯ ಅಭಿವೃದ್ಧಿ ಕೆಲಸಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ. ಎಲ್ಲವನ್ನೂ ಜನರು ತೀರ್ಮಾನ ಮಾಡುತ್ತಾರೆ ಎಂದು ಕಾಂಗ್ರೆಸ್ಗೆ ಸವಾಲೆಸೆದರು.
ನರೇಂದ್ರ ಮೋದಿ ಯವರ ನಾಯಕತ್ವದಲ್ಲಿರುವ ಕಾರ್ಯಕ್ರಮಗಳು, ಬಡವರ, ರೈತರ, ಹೆಣ್ಣುಮಕ್ಕಳಪರವಾಗಿದೆ. ಕೋವಿಡ್ ನಿರ್ವಹಣೆ, ಆರ್ಥಿಕ ಸಬಲೀಕರಣ ಮುಂತಾದ ಕೆಲಸಗಳಿಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿರೋಧ ಪಕ್ಷವನ್ನು ಧೂಳಿಪಟ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸವನ್ನು ಮಾಡುವ ಪಣವನ್ನು ನಮ್ಮ ನಾಯಕರು ತೊಟ್ಟಿದ್ದಾರೆ ಎಂದರು.