ಬೆಂಗಳೂರು: ಕಾಂಗ್ರೆಸ್ ಮೊದಲ ಸಚಿವ ಸಂಪುಟ ಸಭೆಯಲ್ಲಿ ಜನರ ನಿರೀಕ್ಷೆ ಹುಸಿಯಾಗಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ನೀಡಿರುವ ಐದು ಗ್ಯಾರಂಟಿಗಳ ಬಗ್ಗೆ ಜನರು ನಿರೀಕ್ಷೆ ಇಟ್ಟುಕೊಂಡಿದ್ದರು. ಇವುಗಳ ಬಗ್ಗೆ ಮುಖ್ಯಮಂತ್ರಿ ಸರಿಯಾಗಿ ಸ್ಪಷ್ಟನೆ ನೀಡಿಲ್ಲ, ಯಾವಾಗ ಜಾರಿಯಾಗುತ್ತದೆ ಎಂಬುದರ ಬಗ್ಗೆ ಹೇಳಿಲ್ಲ ಎಂದರು. ನನ್ನ ಅವಧಿಯಲ್ಲಿ ರಾಜ್ಯ ಸರ್ಕಾರದ ಆದಾಯ ಹೆಚ್ಚಾಗಿತ್ತು. ಸುಳ್ಳು ಹೇಳಿ ಜನರನ್ನು ಯಾಮಾರಿಸಲು ಆಗದು, ಇನ್ನೊಂದು ಸಂಪುಟ ಸಭೆಯವರೆಗೂ ಕಾಯೋಣ ಎಂದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ 3 ಲಕ್ಷ ಕೋಟಿ ರೂ. ಸಾಲ ಮಾಡಲಾಗಿದೆ ಎಂಬ ಸಿದ್ದರಾಮಯ್ಯ ಅವರ ಆರೋಪ ಕುರಿತು ಪ್ರತಿಕ್ರಿಯಿಸಿದ ಬೊಮ್ಮಾಯಿ, ಇದಕ್ಕೆ ಅಧಿವೇಶನದಲ್ಲಿ ಉತ್ತರ ನೀಡುತ್ತೇವೆ. ಕೋವಿಡ್ ನಿಂದಾಗಿ ರಾಜ್ಯದಲ್ಲಿ ಈ ವರ್ಷ ಸಾಲ ಹೆಚ್ಚಾಗಿದೆ ಎಂದು ತಿಳಿಸಿದರು. ಕಾಂಗ್ರೆಸ್ ಜನರಿಗೆ ನೀಡಿರುವ ಎಲ್ಲಾ ಭರವಸೆ ಈಡೇರಿಸಲಿ ಎಂದ ಅವರು, ಗ್ಯಾರಂಟಿ ಘೋಷಣೆಯಾಗಿಯೇ ಉಳಿಯಲಿದೆ ಎಂದು ಹೇಳಿದರು.
ಇನ್ನು 5 ಗ್ಯಾರಂಟಿಗಳನ್ನು ಜಾರಿ ಮಾಡಲು 50 ಸಾವಿರ ಕೋಟಿ ರುಪಾಯಿ ಬೇಕಾಗುತ್ತದೆ ಎಂದು ಅವರು ಹೇಳಿಕೆ ನೀಡಿದ್ದಾರೆ. ಅದಕ್ಕೆ ಬೇಕಾದ ಹಣಕಾಸು ಹೊಂದಿಸಲು ಯಾವುದೇ ಆಲೋಚನೆ ಇಲ್ಲ ಎನ್ನುವುದು ಅವರ ಮಾತಿನಲ್ಲಿ ಸ್ಪಷ್ಟವಾಗಿದೆ ಕಾಂಗ್ರೆಸ್‌ನ ನಿಜವಾದ ಬಣ್ಣ ಈಗ ಬಯಲಾಗುತ್ತಿದೆ” ಎಂದು ಆರೋಪಿಸಿದರು.