ಬೆಂಗಳೂರು: ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್ ಹುಸಿ ಭರವಸೆಗೆ ಯಾಮಾರದಿರಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗೆ ‘ಸ್ತ್ರೀ ಸಾಮರ್ಥ್ಯ-ನಮೋ ಸ್ತ್ರೀ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯಾವುದೇ ಬಂಡವಾಳದ ಖಾತ್ರಿಯಿಲ್ಲದೇ ಗ್ಯಾರಂಟಿ ಕಾರ್ಡ್ ಎನ್ನುತ್ತಾ ಮಹಿಳೆಯರನ್ನು ಯಾಮಾರಿಸುತ್ತಿದ್ದಾರೆ. ಮಹಿಳೆಯರಿಗೆ ದುಡಿಯುವ ಶಕ್ತಿ ಇದ್ದು, ಅದೇ ಅವರ ಬಂಡವಾಳವಾಗಿದೆ ಎಂದು ಅಭಿಪ್ರಾಯಪಟ್ಟರು.
ಮಹಿಳೆಯರಿಗೆ ಭಿಕ್ಷೆ ಬೇಡ, ದುಡಿಯುವ ಕೈಗಳಿಗೆ ಅವಕಾಶ ಬೇಕು. ನಮ್ಮ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಇಂಥ ಜನೋಪಯೋಗಿ ಯೋಜನೆಗಳನ್ನು ಘೋಷಿಸಿದ್ದು, ಅದರಂತೆ ಜಾರಿಗೆ ತರಲಾಗಿದೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ಕಾರ್ಡ್‌ಗೆ ಮರುಳಾಗದಿರಿ ಎಂದು ಕಾಂಗ್ರೆಸ್‌ಗೆ ಟಾಂಗ್ ನೀಡಿದರು.
ಸಚಿವ ಅಶ್ವತ್ಥ್ ನಾರಾಯಣ್ ಮಾತನಾಡಿ, ಮಹಿಳೆಯರ ಅಪೌಷ್ಟಿಕತೆ ತಡೆಗೆ ಅಂಗನವಾಡಿಗಳ ಮೂಲಕ ಬಿಸಿಯೂಟ ನೀಡಲಾಗುವುದು. ವಿದ್ಯಾರ್ಥಿನಿಯರಿಗೆ ಉಚಿತ ಬಸ್‌ಪಾಸ್ ಸೌಲಭ್ಯ ಒದಗಿಸಲಾಗುತ್ತಿದ್ದು, ಒಟ್ಟು 8 ಲಕ್ಷ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿದೆ ಎಂದು ಭರವಸೆ ನೀಡಿದರು.
ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಪ್ರತೀ ಸದಸ್ಯರಿಗೆ ತಿಂಗಳಿಗೆ ತಲಾ 10 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುವುದು ಎಂದು ಕಾಂಗ್ರೆಸ್ ಘೋಷಿಸಿದೆ. ಅಷ್ಟೇ ಅಲ್ಲದೇ ಮನೆ ಯಜಮಾನಿಗೆ 2 ಸಾವಿರ ರೂ ನೀಡೋದಾಗಿ ವಾಗ್ದಾನ ನೀಡಿದೆ.