ಮುಧೋಳ: ವಾರಕ್ಕೆ ಒಬ್ಬ, ಈ ವಾರ ಒಬ್ಬ, ಮುಂದಿನವಾರ ಮತ್ತೊಬ್ಬ ಎಂದು ಮೋದಿ, ಅಮಿತ್ ಶಾ, ನಡ್ಡಾ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದರು. ಬಾಗಲಕೋಟೆ ಜಿಲ್ಲೆ ಮುಧೋಳ ನಗರದಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿ, ಬಿಜೆಪಿಯವರು ಚುನಾವಣೆಯಲ್ಲಿ ಗೆಲ್ಲಬೇಕೆಂದು ಮೋದಿ, ಅಮಿತ್ ಶಾರನ್ನು ಕರೆತರುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ನವರಿಗೆ ಧಮ್ ಇದ್ದರೆ, ತಾಕತ್ ಇದ್ದರೆ ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳುತ್ತಾರೆ. ಮಿಸ್ಟರ್ ಬೊಮ್ಮಾಯಿ ಅವರೇ, ನಿಮಗೆ ಧಮ್ ಇದ್ರೆ ತಾಕತ್ ಇದ್ರೆ ಬನ್ನಿ ಅಭಿವೃದ್ಧಿ ಕೆಲಸದ ಬಗ್ಗೆ ಚರ್ಚೆ ಮಾಡೋಣ. ಹೀಗೆಂದರೆ ಅವರು ಬರುವುದಿಲ್ಲ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ನೀರಾವರಿಗಾಗಿ ಮಿಸ್ಟರ್ ಜಾರಕಿಹೊಳಿ, ಮಿಸ್ಟರ್ ಕಾರಜೋಳ 1.50 ಲಕ್ಷ ಕೋಟಿ ರೂ. ಖರ್ಚು ಮಾಡುತ್ತೇವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಾರೆ. ಕಾರಜೋಳ ಅವರೇ, ನಿಮಗೆ ನಾಚಿಕೆ ಇದ್ರೆ, ಮರ್ಯಾದೆ ಇದ್ರೆ ರಾಜೀನಾಮೆ ಕೊಟ್ಟುಮನೆಗೆ ಹೋಗಿ ಎಂದು ಗುಡುಗಿದರು.
ಕರ್ನಾಟಕವು ಪ್ರತಿ ವರ್ಷ ನಿರಂತರ ಪ್ರವಾಹ ಎದುರಿಸಿದಾಗ, ಕರ್ನಾಟಕದತ್ತ ತಿರುಗಿಯೂ ನೋಡದ ಮೋದಿಯವರು ಈಗ ಚುನಾವಣೆ ಸಂದರ್ಭದಲ್ಲಿ ಕರ್ನಾಟಕ ಟೂರಿಸ್ಟ್ ಆಗಿದ್ದಾರೆ. ಈ ದ್ರೋಹಕ್ಕೆ ಧನ್ಯವಾದಗಳು! ಎಂದು ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿತ್ತು.