ಉಡುಪಿ: ಪ್ರಮೋದ್ ಮಧ್ವರಾಜ್ ರನ್ನು ಈ ಬಾರಿ ಚುನಾವಣೆಯಲ್ಲಿ ಸೋಲಿಸಿ ಎಂದು ಮಾಜಿ ಮುಖ್ಯಮಂತ್ರಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮನವಿ ಮಾಡಿದರು.
ಪ್ರಜಾಧ್ವನಿ ಯಾತ್ರೆಯ ಬಹಿರಂಗ ಸಭೆಯಲ್ಲಿ ಮಾತನಾಡಿ, ನಾನು ಆತನಿಗೆ ಮಂತ್ರಿ ಮಾಡಿದ್ದೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಆತ ಹಣ ಪಡೆದು ಜೆಡಿಎಸ್ ಪಕ್ಷದಿಂದ ಅಭ್ಯರ್ಥಿಯಾಗಿ ನಿಂತು, ಸೋತ ಬಳಿಕ ಮತ್ತೆ ನನ್ನಲ್ಲಿ ಬಂದು ಕಾಂಗ್ರೆಸ್ ಸೇರುವುದಾಗಿ ಹೇಳಿ ಪಕ್ಷಕ್ಷಕೆ ಸೇರ್ಪಡೆಗೊಂಡು ಇದೀಗ ಮತ್ತೆ ಬಿಜೆಪಿ ಸೇರಿದ್ದಾರೆ ಎಂದರು.ಅಲ್ಲಿಗೆ ಹೋಗಿ ಆತ ಆರ್ ಎಸ್ ಎಸ್ ಹಾಗೂ ಮೋದಿಯವರನ್ನು ಬಿಜೆಪಿಯವರಿಗಿಂತ ಹೆಚ್ಚು ಹೊಗಳುತ್ತಿದ್ದಾರೆ ಅಂಥವರನ್ನು ಈಬಾರಿ ಚುನಾವಣೆಯಲ್ಲಿ ಸೋಲಿಸಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿ, ಪ್ರಮೋದ್ ಮಧ್ವರಾಜ್ ಗೆ ಕಾಂಗ್ರೆಸ್ ಎಲ್ಲಾ ಹುದ್ದೆ ನೀಡಿದರೂ ಕೂಡ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ಅವರು ಯಾವುದೇ ಜಾಗದಲ್ಲಿ ಚುನಾವಣೆಗೆ ನಿಂತರೂ ಅವರನ್ನು ಸೋಲಿಸಬೇಕು ಎಂದು ಹೇಳಿದರು.
ಪ್ರಮೋದ್ ಪ್ರಥಮ ಬಾರಿ ಶಾಸಕರಾದರೂ ಮಂತ್ರಿ ಮಾಡಲಾಯಿತು. ಅವರ ತಂದೆ ತಾಯಿ ಎಲ್ಲರೂ ಮಂತ್ರಿಯಾಗಲು ಕಾಂಗ್ರೆಸ್ ಕಾರಣವಾಗಿದ್ದು ಪಕ್ಷ ಅವರಿಗೆ ಇನ್ನೇನು ಮಾಡಬೇಕು. ಇಷ್ಟು ಅವಕಾಶ ನೀಡಿದರೂ ಪಕ್ಷ ದ್ರೋಹ ಮಾಡಿ ಬಿಜೆಪಿಗೆ ಹೋದರು. ಆದರೆ ಅವರೊಂದಿಗೆ ಒಬ್ಬನೇ ಒಬ್ಬ ಕಾಂಗ್ರೆಸ್ ಕಾರ್ಯಕರ್ತ ಬಿಜೆಪಿಗೆ ಹೋಗಿಲ್ಲ ಇದು ಅಭಿನಂದನೀಯ ಎಂದರು.
ಬಿಜೆಪಿ ಪಕ್ಷ ಟಿಕೇಟ್ ನೀಡುತ್ತೋ ಇಲ್ಲವೋ ಗೊತ್ತಿಲ್ಲ ಆದರೆ ಟಿಕೇಟ್ ನೀಡಿದಲ್ಲಿ ಅವರು ಎಲ್ಲೇ ಚುನಾವಣೆಗೆ ನಿಂತರೂ ಕಾರ್ಯಕರ್ತರು ಸೇರಿಕೊಂಡು ಸೋಲಿಸಿ ಎಂದು ಕರೆ ನೀಡಿದರು.