ಬೆಂಗಳೂರು : ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಹೇಮಂತ್ ಕುಮಾರ್ ಮೇಲೆ ಖಾಸಗಿ ಸಾರಿಗೆ ಒಕ್ಕೂಟದಿಂದ ಇಲಾಖೆಯ ಆಯುಕ್ತ ಯೋಗಿಶ್ ಅವರಿಗೆ ಇಂದು ದೂರು ನೀಡಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಾರಿಗೆ ಒಕ್ಕೂಟದ ಮೊದಲ ಸಭೆಯಲ್ಲಿ ಭಾಗವಹಿಸಲು, ಹೋರಾಟಕ್ಕೆ ಕರೆ ನೀಡಿದ್ದ ಸಂಘಟನೆಗಳ ಹೆಸರನ್ನು ಕೈಬಿಟ್ಟು ತಮಗೆ ಬೇಕಾದ ಹೆಸರುಗಳನ್ನು ಮಾತ್ರ ಸಿಎಂ ಅವರ ಸಭೆಗೆ ಆಹ್ವಾನಿಸಿದ್ದಾರೆ ಎಂದು ಖಾಸಗಿ ಸಾರಿಗೆ ಒಕ್ಕೂಟ ಆರೋಪಿಸಿದೆ.
ಇದನ್ನೂ ಓದಿ : ಇಂದು ಅಥವಾ ನಾಳೆಯೊಳಗೆ ವಿಪಕ್ಷ ನಾಯಕನ ನೇಮಕ: ಬಿಎಸ್‌ವೈ
ಸಭೆಯ ವಿಚಾರವಾಗಿ ಖಾಸಗಿ ಸಾರಿಗೆ ಒಕ್ಕೂಟದ ಚಾಲಕನಿಂದ ಹೆಚ್ಚುವರಿ ಆಯುಕ್ತ ಹೇಮಂತ್ ಅವರಿಗೆ ಕರೆ ಮಾಡಿದಾಗ ಅವರು ಬೇಜವಾಬ್ದಾರಿತನದ ಉತ್ತರ ಕೊಟ್ಟಿದ್ದಾರೆ. ಸಿಎಂ ಬಳಿ ಹೋದರು ಏನು ಪ್ರಯೋಜನವಾಗಲ್ಲ ಎಂಬ ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದಾರೆ.
ಹೇಮಂತ್ ಮತ್ತು ಖಾಸಗಿ ಸಾರಿಗೆ ಚಾಲಕ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿತ್ತು. ಬುಧವಾರ ನಡೆದ ಸುದ್ಧಿಗೋಷ್ಠಿಯಲ್ಲಿ ಈ ವಿಚಾರವಾಗಿ ಆಯುಕ್ತರು ಅಥವಾ ಸಿಎಂಗೆ ಲಿಖಿತ ದೂರು ನೀಡಬೇಕಿತ್ತು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದರು.
ಈ ಹಿನ್ನೆಲೆ ಸಾರಿಗೆ ಹೆಚ್ಚುವರಿ ಆಯುಕ್ತ ಹೇಮಂತ್ ಕುಮಾರ್ ಮೇಲೆ ಕ್ರಮ ಕೈಗೊಳ್ಳುವಂತೆ ಸಾರಿಗೆ ಆಯುಕ್ತರಿಗೆ ಖಾಸಗಿ ಒಕ್ಕೂಟಗಳು ದೂರು ನೀಡಿವೆ.
ಇದನ್ನೂ ಓದಿ : ಗೃಹಲಕ್ಷ್ಮಿ ನೋಂದಣಿ ಸ್ಥಗಿತವಾಗಿಲ್ಲ; ಸಚಿವೆ ಹೆಬ್ಬಾಳ್ಕರ್ ಸ್ಪಷ್ಟನೆ!
ಏನಿದು ಹಗ್ಗ-ಜಗ್ಗಾಟ..?
ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾಗಿರುವ ಬಳಿಕ ಖಾಸಗಿ ಸಾರಿಗೆ (Private Transport) ಉದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ. ಈ ಸಮಸ್ಯೆಗೆ ಪರಿಹಾರ ನೀಡುವಂತೆ ಖಾಸಗಿ ಸಾರಿಗೆ ಒಕ್ಕೂಟ ಸರ್ಕಾರಕ್ಕೆ 10 ದಿನಗಳ ಗಡುವು ನೀಡಿತ್ತು. ಆದರೂ ಕೂಡಾ ಸಮಸ್ಯೆಗೆ ಸರ್ಕಾರ ಯಾವುದೇ ಸ್ಪಂದನೆ ನೀಡದೇ ಇರುವ ಹಿನ್ನೆಲೆ ಸೆಪ್ಟೆಂಬರ್ 11 ರಂದು ಬೆಂಗಳೂರು ಬಂದ್‌ಗೆ (Bengaluru Bandh) ಖಾಸಗಿ ಸಾರಿಗೆ ಒಕ್ಕೂಟ ಕರೆ ನೀಡಿದೆ.
ಈ ಕುರಿತು ಬುಧವಾರವಷ್ಟೇ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸುದ್ದಿಗೋಷ್ಠಿ ನಡೆಸಿ ಖಾಸಗಿ ಸಾರಿಗೆ ಒಕ್ಕೂಟಗಳಿಗೆ ಸೆಡ್ಡು ಹೊಡೆದು ಅವರು ಬಂದ್ ಮಾಡುವುದಾದರೆ ಮಾಡಲಿ, ಸರ್ಕಾರದಿಂದ ಇದಕ್ಕೆ ಪರ್ಯಾಯವಾಗಿ ಸಾರಿಗೆ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗುವುದು ಎಂದು ಗುಡುಗಿದ್ದರು.
ಸೆಪ್ಟೆಂಬರ್ 11ರ ಸೋಮವಾರ ಆಟೋ, ಟ್ಯಾಕ್ಸಿ, ಏರ್ ಪೋರ್ಟ್ ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್, ಕಾರ್ಪೋರೇಟ್ ವಾಹನಗಳು, ಸ್ಕೂಲ್ ಬಸ್ ಚಾಲಕರು, ಫ್ಯಾಕ್ಟರಿ ವಾಹನ, ಸ್ಟೇಜ್ ಗ್ಯಾರೇಜ್ ಬಸ್‌ಗಳು ಇರುವುದಿಲ್ಲ. ಭಾನುವಾರ ಮಧ್ಯರಾತ್ರಿಯಿಂದಲೇ ಬೆಂಗಳೂರು ಬಂದ್ ಇರಲಿದೆ ಎಂದು ಖಾಸಗಿ ಸಾರಿಗೆ ಒಕ್ಕೂಟ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿತ್ತು. ಮೊದಲು ಒಟ್ಟು 32 ಸಂಘಟನೆಗಳಿರುವ ಖಾಸಗಿ ಸಾರಿಗೆ ಒಕ್ಕೂಟ ಬೆಂಗಳೂರು ಬಂದ್ ನಡೆಸುವುದಾಗಿ ತಿಳಿಸಿತ್ತು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.