ಬೆಂಗಳೂರು: ನೆರವು ಕೇಳಿಬಂದ ಮಹಿಳೆಗೆ ಸಚಿವ ವಿ.ಸೋಮಣ್ಣ ಕಪಾಳಮೋಕ್ಷ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಸಚಿವ ಸೋಮಣ್ಣ ವಿರುದ್ಧ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದೆ.
ಅಕ್ಟೋಬರ್ 23ರಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಮಹಿಳೆಗೆ ಸಚಿವ ಸೋಮಣ್ಣ ಕಪಾಳಮೋಕ್ಷ ಮಾಡಿದ್ದರು. ಬಳಿಕ ಈ ಕುರಿತು ಸ್ವತಃ ವಿ. ಸೋಮಣ್ಣ ಮಾತನಾಡಿದ್ದು, ಕಾರ್ಯಕ್ರಮದಲ್ಲಿ ಸಣ್ಣ ಅಪಚಾರವನ್ನು ಮಾಡಿಲ್ಲ. ಪ್ರಾಯಶಃ ಯಾರಿಗಾದರು ಮನಸ್ಸಿಗೆ ನೋವಾಗಿದ್ದಾರೆ ಕ್ಷಮೆ ಯಾಚಿಸುತ್ತೇನೆ, ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಕ್ಷಮೆ ಕೇಳಿದ್ದರು. 45 ವರ್ಷ ಹಲವು ಏಳುಬೀಳು ಕಂಡಿದ್ದೇನೆ. ನಿನ್ನೆಯ ಘಟನೆ ಘಟನೆಯೇ ಅಲ್ಲ. ಹೆಣ್ಣು ಮಗಳು ಪದೇಪದೇ ವೇದಿಕೆ ಮೇಲೆ ಬರ್ತಾ ಇದ್ದಳು. ತಾಯಿ ಎಷ್ಟು ಸಾರಿ ಬರ್ತೀಯ ಅಂತ ವಿಚಾರಿಸಿದೆ, ನಿನ್ನ ಸಮಸ್ಯೆ ಬಗೆ ಹರಿಸುತ್ತೇನೆ ಎಂದು ಕೈಯಲ್ಲಿ ಪಕ್ಕಕ್ಕೆ ಸರಿಸಿದ್ದೇನೆ, ವಿನಃ ಇನ್ನೇನು ಉದ್ದೇಶ ಇರಲ್ಲಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಹೆಣ್ಣು ಮಕ್ಕಳ ಬಗ್ಗೆ ಅಪಾರವಾದ ಗೌರವ, ಮಮಕಾರ ಇದೆ. ನಾನು ಕೂಡ ಬಡತನದಿಂದಲೇ ಬಂದವನು. ಆ ಹೆಣ್ಣು ಮಗಳಿಗೆ ಸಹ ಹಕ್ಕು ಪತ್ರ ಕೊಡಿಸಿದ್ದೇನೆ. ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಕ್ಷಮೆ ಕೇಳಿದ್ದಾರೆ.
ಘಟನೆ ಕುರಿತು ಸ್ಪಷ್ಟನೆ ನೀಡಿರುವ ಪೆಟ್ಟು ತಿಂದ ಮಹಿಳೆ ಕೆಂಪಮ್ಮ, ನನಗೆ ಸಚಿವರು ಕಪಾಳಮೋಕ್ಷ ಮಾಡಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ನನಗೂ ಸೈಟ್ ಕೊಡಿ ಎಂದು ಕಾಲಿಗೆಬಿದ್ದೆ. ಸಚಿವರು ನನ್ನನ್ನು ಎತ್ತಿ ಕ್ಷಮೆ ಕೇಳಿ ಸಮಾಧಾನಪಡಿಸಿದರು. ಸಚಿವರು ನನಗೆ ಹೊಡೆಯಲಿಲ್ಲ. ಆದರೆ ಅವರು ನನಗೆ ಹೊಡೆದಿದ್ದಾರೆಂದು ತಪ್ಪು ಅಪವಾದ ಹೊರಿಸಿದ್ದಾರೆ. ಸೈಟಿಗೆಂದು ಕೊಟ್ಟಿದ್ದ ನಾಲ್ಕು ಸಾವಿರ ರೂಪಾಯಿಯನ್ನು ವಾಪಸ್ ಕೊಡಿಸಿದ್ದಾರೆ. ಪುಣ್ಯಾತ್ಮ ನನಗೆ ಸೈಟ್ ಕೊಡ್ಸಿ ನನ್ನ ಮಕ್ಕಳಿಗೆ ದಾರಿ ತೋರಿಸಿ ಒಳ್ಳೆಯದು ಮಾಡಿದ್ದಾರೆ. ನಾನು ಅವರ ಫೋಟೋ ಇಟ್ಕೊಂಡು ಪೂಜೆ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದರು. ಸದ್ಯ ಸಚಿವರ ಆಪ್ತ ಸಹಾಯಕನಿಂದ ಮಹಿಳೆಯ ಸ್ಪಷ್ಟನೆ ವಿಡಿಯೋ ಬಿಡುಗಡೆ ಮಾಡಲಾಗಿದೆ. ಆದ್ರೆ ಇದಕ್ಕೂ ಮೊದಲು ಹರಿದಾಡಿದ್ದ ವಿಡಿಯೋದಲ್ಲಿ ಸಚಿವ ವಿ.ಸೋಮಣ್ಣ ಮಹಿಳೆಯ ಕೆನ್ನೆಗೆ ಹೊಡೆಯುವುದು ಸ್ಪಷ್ಟವಾಗಿ ದಾಖಲಾಗಿದೆ. ಸದ್ಯ ಸೋಮಣ್ಣ ವಿರುದ್ಧ ರಾಜ್ಯ ಮಹಿಳಾ ಆಯೋಗಕ್ಕೆ ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ದೂರು ನೀಡಿದ್ದು, ಸೋಮಣ್ಣರಿಗೆ ಸಂಕಟ ಎದುರಾಗುವುದರಲ್ಲಿ ಅನುಮಾನವೇ ಇಲ್ಲ.