ನವದೆಹಲಿ: ಲೋಕಸಭೆ ಚುನಾವಣೆಗೆ ಅಖಾಡ ಸಿದ್ಧವಾಗುತ್ತಿರುವ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ 20 ಸದಸ್ಯರ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯನ್ನು (CWC) ಪುನರ್ ರಚಿಸಲಾಗಿದೆ. ಪಟ್ಟಿಯಲ್ಲಿ ಕಾಂಗ್ರೆಸ್ ನಾಯಕರಾದ ಸಚಿನ್ ಪೈಲಟ್, ಶಶಿ ತರೂರ್, ಪಂಜಾಬ್ ಮಾಜಿ ಸಿಎಂ ಚರಂಜಿತ್ ಸಿಂಗ್ ಚನ್ನಿ, ಆನಂದ್ ಶರ್ಮಾ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ.
ನಾಸೀರ್ ಹುಸೇನ್, ಅಲ್ಕಾ ಲಂಬಾ, ಸುಪ್ರಿಯಾ ಶ್ರೀನಾಟೆ, ಪ್ರಣಿತಿ ಶಿಂಧೆ, ಪವನ್ ಖೇರಾ, ಗಣೇಶ್ ಗೋಡಿಯಾಲ್, ಯಶೋಮತಿ ಠಾಕೂರ್ ಸೇರಿದಂತೆ ಇತರ ನಾಯಕರನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇದರಲ್ಲಿ ವೀರಪ್ಪ ಮೊಯ್ಲಿ, ಮನೀಶ್ ತಿವಾರಿ ಖಾಯಂ ಆಹ್ವಾನಿತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಈ ಸಮಿತಿಯ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯೋಣ..
ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಎಂದರೇನು?: ಕಾರ್ಯಕಾರಿ ಸಮಿತಿಯು ಕಾಂಗ್ರೆಸ್‌ನ ಅತ್ಯುನ್ನತ ಕಾರ್ಯಕಾರಿ ಅಧಿಕಾರವಾಗಿದ್ದು ಅದು ಪಕ್ಷದ ಸಂವಿಧಾನದ ನಿಬಂಧನೆಗಳನ್ನು ಕಾರ್ಯಗತಗೊಳಿಸುವಲ್ಲಿ ಅಂತಿಮ ನಿರ್ಣಯವನ್ನು ತೆಗೆದುಕೊಳ್ಳುತ್ತದೆ. ಇದು ತಾಂತ್ರಿಕವಾಗಿ ಪಕ್ಷದ ಅಧ್ಯಕ್ಷರನ್ನು ತೆಗೆದು ಹಾಕುವ ಅಥವಾ ನೇಮಿಸುವ ಅಧಿಕಾರವನ್ನು ಹೊಂದಿದೆ ಮತ್ತು ಸಾಮಾನ್ಯವಾಗಿ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ಅಥವಾ ಮರುಚುನಾವಣೆಯ ನಂತರ ಮರುಪರಿಶೀಲಿಸಲಾಗುತ್ತದೆ.
ಹೊಸ CWC ರಚನೆಯ ಗುರಿಗಳೇನು: ಚುನಾವಣೆಗೆ ಒಳಪಡುವ ರಾಜ್ಯಗಳಿಗೆ ಈ ಸಮಿತಿ ಸಂದೇಶ ನೀಡಲಿದ್ದು,ಕಾಂಗ್ರೆಸ್ ಪಕ್ಷವು 2024 ರ ಚುನಾವಣೆಯ ಪ್ರಚಾರವನ್ನು ಪ್ರಾರಂಭಿಸುವ ಮೊದಲು ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ, ತೆಲಂಗಾಣ ಮತ್ತು ಮಿಜೋರಾಂನಲ್ಲಿ ಚುನಾವಣೆಗಳನ್ನು ಎದುರಿಸುತ್ತಿದೆ.ಹಾಗಾಗಿ ಈ ಸಮಿತಿಯು ಆ ರಾಜ್ಯಗಳ ಚುನಾವಣೆಗಳಲ್ಲಿ ಪ್ರಮುಖ ನಿರ್ಧಾರ ತೆಗೆದುಕೊಳ್ಳುತ್ತವೆ.
ರಾಜಸ್ಥಾನದ ಮಾಜಿ ಡಿಸಿಎಂ ಸಚಿನ್ ಪೈಲಟ್ ಈ ಸಮಿತಿಯಲ್ಲಿ ಸ್ಥಾನ ಪಡೆದಿದ್ದಾರೆ. ಅವರ ಸೇರ್ಪಡೆಯು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರೊಂದಿಗಿನ ಭಿನ್ನಾಭಿಪ್ರಾಯವನ್ನು ಬೆಂಬಲಿಸದಿದ್ದರೂ, ಭವಿಷ್ಯದಲ್ಲಿ ಅವರಿಗೆ ಹೆಚ್ಚಿನ ಜವಾಬ್ದಾರಿ ನೀಡಲು ಕಾಂಗ್ರೆಸ್ ಸಿದ್ಧವಾಗಿದೆ ಎಂಬುದರ ಸಂದೇಶ ರವಾನಿಸಿದೆ.
ಇದನ್ನೂ ಓದಿ: ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಪುನರ್ ರಚನೆ!
ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ಸಚಿವ ಸಾಹು ಅವರನ್ನು ಸೇರಿಸುವ ಮೂಲಕ ಒಬಿಸಿ ಮತದಾರರಿಗೆ ಸಂದೇಶ ರವಾನಿಸಲು ಕಾಂಗ್ರೆಸ್ ಪ್ರಯತ್ನಿಸಿದೆ.
ವಿವಿಧ ರಾಜ್ಯಗಳ ರಾಜಕಾರಣದಲ್ಲಿ ಬಂಡಾಯದ ಅಧ್ಯಾಯವನ್ನು ಮುಚ್ಚುವುದು ಹಾಗೂ ಕೆಲವು ಹೊಸ ಮುಖಗಳನ್ನು ಸೇರಿಸುವುದು ಈ ಸಮಿತಿಯ ಉದ್ದೇಶವಾಗಿದೆ. ನಿಷ್ಠಾವಂತರು, ಪಕ್ಷದ ಸ್ಥಾನಗಳಿಂದ ಕೈಬಿಡಲ್ಪಟ್ಟ ಅಥವಾ ಅಧಿಕೃತ ಸ್ಥಾನಗಳನ್ನು ನೀಡದ ನಾಯಕರಿಗೆ ಅವಕಾಶ ಕಲ್ಪಿಸಲು ಈ ಸಮಿತಿ ಪ್ರಯತ್ನಿಸಿದೆ.
ಸಮಿತಿಯಲ್ಲಿ ಈ ಹಿಂದೆ ಇದ್ದಂತಹ ಹೆಚ್ಚಿನ ಸದಸ್ಯರನ್ನು ಉಳಿಸಿಕೊಳ್ಳಲಾಗಿದೆ. ಇವರಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಮನಮೋಹನ್ ಸಿಂಗ್, ಎಕೆ ಆಂಟನಿ, ಅಂಬಿಕಾ ಸೋನಿ, ಕೆ.ಸಿ.ವೇಣುಗೋಪಾಲ್, ಮುಕುಲ್ ವಾಸ್ನಿಕ್, ಪಿ ಚಿದಂಬರಂ, ಆನಂದ್ ಶರ್ಮಾ, ತಾರಿಕ್ ಅನ್ವರ್, ಅಜಯ್ ಮಾಕನ್, ಕುಮಾರಿ ಸೆಲ್ಜಾ, ರಣದೀಪ್ ಸಿಂಗ್ ಸುರ್ಜೆವಾಲಾ ಸೇರಿದಂತೆ ಹಲವರಿದ್ದಾರೆ. ಗೌರವ್ ಗೊಗೊಯ್, ಸಚಿನ್ ಪೈಲಟ್, ಕನ್ಹಯ್ಯಾ ಕುಮಾರ್, ಮಾಣಿಕಂ ಟ್ಯಾಗೋರ್ ಮತ್ತು ಅಲ್ಕಾ ಲಂಬಾ ಅವರಂತಹ ನಾಯಕರಿಗೆ ಅವಕಾಶ ಕಲ್ಪಿಸಲಾಗಿದ್ದು, ಅವರೆಲ್ಲರೂ ಸಂಘಟನೆಯಲ್ಲಿ ಪ್ರಮುಖ ಸ್ಥಾನಗಳನ್ನು ಅಲಂಕರಿಸುವ ಸಾಧ್ಯತೆಯಿದೆ.
ಲೋಕಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ಚರ್ಚೆಗೆ ಚಾಲನೆ ನೀಡಿ ಮಣಿಪುರದ ಹಿಂಸಾಚಾರದ ಬಗ್ಗೆ ತೀಕ್ಷ್ಣವಾಗಿ ಮಾತನಾಡಿದ ಗೌರವ್ ಗೊಗೊಯ್ ಅವರಿಗೆ ಬಡ್ತಿ ನೀಡಲಾಗಿದೆ.
ಸಾಮಾಜಿಕ ಪ್ರಾತಿನಿಧ್ಯ ಮತ್ತು ರಾಜ್ಯವಾರು ಹೊಂದಾಣಿಕೆಗಳಿಗೆ ಒತ್ತು ನೀಡುವುದು ಈ ಸಮಿತಿಯ ಮತ್ತೊಂದು ಉದ್ದೇಶವಾಗಿದೆ. 2024ರ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್‌ಗೆ ಆದ್ಯತೆಯ ವಿಷಯವಾಗಿರುವ ದಲಿತ, ಬುಡಕಟ್ಟು, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಪ್ರಾತಿನಿಧ್ಯವನ್ನು ಪ್ರತಿಬಿಂಬಿಸಲು ಪ್ರಯತ್ನ ನಡೆಸಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.