ಮಂಡ್ಯ : ನಾನು ಸಿಎಂ ಆದ ಕೂಡಲೇ ಎಲ್ಲರಿಗೂ ಉಚಿತವಾಗಿ 7 ಕೆ.ಜಿ ಅಕ್ಕಿ ಕೊಟ್ಟೆ. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದಾಗ ಅದನ್ನು 5 ಕೆ.ಜಿಗೆ ಇಳಿಸಿತು. ವಿದ್ಯಾಸಿರಿ ಕೊಟ್ಟೆ ಅದನ್ನೂ ನಿಲ್ಲಿಸಲಾಯಿತು, ಇಂದಿರಾ ಕ್ಯಾಂಟೀನ್ ಸಹ ನಿಲ್ಲಿಸಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಕನಕದಾಸ ಜಯಂತ್ಯುತ್ಸವ, ಪ್ರತಿಭಾ ಪುರಸ್ಕಾರದಲ್ಲಿ ಮಾತನಾಡಿ, ನಾವು ಮತ್ತೆ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೆ 10 ಕೆಜಿ ಅಕ್ಕಿ ಕೊಡುತ್ತೇವೆ. ಬಿಜೆಪಿಯವರು ಒಂದೇ ಒಂದು ಮನೆ ಕಟ್ಟಿಸಿಕೊಡಲಿಲ್ಲ. ಇವರು ಮತ್ತೆ ಅಧಿಕಾರಕ್ಕೆ ಬರಬೇಕಾ? ನೀವೆಲ್ಲಾ ನನ್ನ ಮೇಲೆ ಪ್ರೀತಿ ಅಭಿಮಾನ ತೋರಿಸುತ್ತೀರಿ, ಅದಕ್ಕೆ ಬೆಲೆ ಸಿಗಬೇಕಾದರೆ ನಾನು ಹೇಳಿದವರಿಗೆ ಮತ ನೀಡಿ ಗೆಲ್ಲಿಸಿ ನನಗೆ ಶಕ್ತಿ ನೀಡಬೇಕು ಎಂದರು. ಇನ್ನೂ ಕೆ.ಆರ್.ಪೇಟೆಯಲ್ಲಿ ಕಾಂಗ್ರೆಸ್‌ನಿಂದ ಯಾರನ್ನೇ ಅಭ್ಯರ್ಥಿಯನ್ನಾಗಿ ಮಾಡಿದರೂ ಗೆಲ್ಲಿಸಬೇಕು.
ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿದರೆ ನನಗೆ ಶಕ್ತಿ ಬರುತ್ತದೆ. ಬಿಜೆಪಿಯರವನ್ನು ಗೆಲ್ಲಿಸಿದರೆ ಬೊಮ್ಮಾಯಿಗೆ ಶಕ್ತಿ ಬರುತ್ತದೆ. ಹೀಗಾಗಿ ಜಿಲ್ಲೆಯ ಏಳೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದರು.ಬೆಂಗಳೂರಿನ ಹೆಬ್ಬಾಳ ಶಾಸಕ ಬೈರತಿ ಸುರೇಶ್ ಮಾತನಾಡಿ, ಸಿದ್ದರಾಮಯ್ಯ ಅವರ ಸಹಕಾರ ಇಲ್ಲದೇ ಈ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಅಧಿಕಾರಕ್ಕೆ ಬರಲು ಅಥವಾ ಕಾಂಗ್ರೆಸ್ ಅಧಿಕಾರಕ್ಕೆ ಬರಲು ನಿಮ್ಮ ಬೆಂಬಲ ಇರಬೇಕು ಎಂದು ಹೇಳಿದರು.