ನವದೆಹಲಿ: 2024ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಏಕಾಂಗಿಯಾಗಿ ಹೋರಾಡಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ದೇಶದಲ್ಲಿ ತುರ್ತು ಪರಿಸ್ಥಿತಿಯಂತಹ ಸನ್ನಿವೇಶ ನಿರ್ಮಾಣವಾಗಿದ್ದು, ಕಾಂಗ್ರೆಸ್ ಎಲ್ಲಾ ಹಂತಗಳಲ್ಲಿ ಹೋರಾಡುತ್ತದೆ. ಭಾರತ್ ಜೋಡೋ ಯಾತ್ರೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ತುಂಬಿದೆ. ಬಿಜೆಪಿಯನ್ನು ಅಧಿಕಾರದಿಂದ ಹೊರದಬ್ಬಲು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು. ಚಿಂತನ ಶಿಬಿರದ ನಿರ್ಧಾರಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ತಿಳಿಸಿದರು.
50 ವರ್ಷದೊಳಗಿನ ಪದಾಧಿಕಾರಿಗಳನ್ನು ನೇಮಕ ಮಾಡುವ ಕಾರ್ಯ ಆರಂಭಗೊಂಡಿದೆ. ಈ ಮೂಲಕ ಪಕ್ಷ ಯುವಕರಿಗೆ ಆದ್ಯತೆ ನೀಡುವ ಕೆಲಸ ಮಾಡುತ್ತಿದೆ ಇನ್ನು ಸ್ವಲ್ಪ ದಿನಗಳಲ್ಲಿ ಈ ಬದಲಾವಣೆ ನಾವು ಕಾಣಬಹುದು ಎಂದು ಹೇಳಿದ್ದಾರೆ.
ವಿಪಕ್ಷಗಳ ಒಗ್ಗೂಡುವಿಕೆಯ ನಮ್ಮ ಪ್ರಯತ್ನ ನಿಷ್ಠೆಯಿಂದ ಕೂಡಿದೆ. ಕೆಲವು ಘಟನೆಗಳ ಅನುಭವಗಳು ನಮಗೆ ಕಹಿಯನ್ನು ಉಂಟು ಮಾಡಿದ್ದರೂ, ಸರ್ವಾಧಿಕಾರಿ ಸರ್ಕಾರ ತೊಲಗಿಸಲು ನಾವು ಅದನ್ನೆಲ್ಲಾ ಮರೆಯಲು ಸಿದ್ಧರಾಗಿದ್ದೇವೆ. ಕೆಲವು ವಿಪಕ್ಷಗಳಿಗೆ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿಯಾಗುವಂತೆ ಮನವಿ ಮಾಡಿದ್ದರೂ ಅವರು ಬರಲಿಲ್ಲ. ಇದೆಲ್ಲದರ ಹೊರತಾಗಿ ವಿರೋಧ ಪಕ್ಷಗಳಾದ ನಾವು ಸಂಪೂರ್ಣವಾಗಿ ಒಗ್ಗಟ್ಟಾಗಿದ್ದೇವೆ ಎಂದರು.
ಸರ್ವಾಧಿಕಾರಿ ಸರ್ಕಾರದ ವಿರುದ್ಧ ಹೋರಾಡುವಂತಹ ದೊಡ್ಡ ಕಾರ್ಯವನ್ನು ಕಾಂಗ್ರೆಸ್ ಹೊತ್ತುಕೊಂಡಿದೆ.ಈ ಯಾತ್ರೆ ಪಕ್ಷದ ಕಾರ್ಯಕರ್ತರನ್ನು ಶಕ್ತಿ ಮತ್ತು ಪುನಶ್ಚೇತನ ನೀಡಿದೆ. ಮೋದಿ ಸರ್ಕಾರದ ವಿರುದ್ಧ ಹೋರಾಡಲು ನಾವು ಯೋಜನೆ ಮತ್ತು ನೀತಿ ರೂಪಿಸಿದ್ದೇವೆ ಎಂದರು.