ನವದೆಹಲಿ:ಈ ಬಜೆಟ್ ಮೋದಿ ಸರ್ಕಾರದ ಎರಡನೇ ಅವಧಿಯ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಆಗಿದ್ದು, 2024 ರ ಏಪ್ರಿಲ್-ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಗುವುದರಿಂದ ಈ ಬಜೆಟ್ ಹೆಚ್ಚು ಮಹತ್ವ ಪಡೆದುಕೊಂಡಿದೆ.
ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ್ದರ ಬಗ್ಗೆ “ಬಜೆಟ್ ಖತಮ್ ಹುವಾ. ರಿಯಾಲಿಟಿ, ಕ್ಲೈಮ್” ಎಂದು ಬರೆದು ಪ್ರಧಾನಿ ಮೋದಿ ಚಿತ್ರವನ್ನು ಕಾಂಗ್ರೆಸ್ ಟ್ವೀಟ್ ಮಾಡಿದೆ. ಸಂಸತ್ತಿನಲ್ಲಿ ನಿರ್ಮಾಲಾ ಸೀತಾರಾಮನ್ ಅವರು ತಮ್ಮ ಬಜೆಟ್ ಭಾಷಣ ಮುಕ್ತಾಯಗೊಳಿಸುತ್ತಿದ್ದಂತೆ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದೆ. ಕೇಂದ್ರ ಸರ್ಕಾರ ಆಕಾಶದೆತ್ತರಕ್ಕೆ ಭರವಸೆಗಳನ್ನು ನೀಡುತ್ತದೆ. ಆದರೆ ಜಾರಿಗೊಳಿಸುವುದು ಮಾತ್ರ ಶೂನ್ಯ ಎಂಬ ಅರ್ಥದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯೋಗ ಮಾಡುತ್ತಿರುವ ಚಿತ್ರವನ್ನು ಟ್ವೀಟ್ ಮಾಡಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023-24ನೇ ಸಾಲಿನ ಬಜೆಟ್ ಮಂಡಿಸಿದ್ದು, ಆದಾಯ ತೆರಿಗೆಯಲ್ಲಿ 7 ಲಕ್ಷ ರೂಪಾಯಿವರೆಗೆ ತೆರಿಗೆ ವಿನಾಯ್ತಿ ನೀಡಿದ್ದಾರೆ. ಜೊತೆಗೆ ಡಿಜಿಟಲ್ ಪಾವತಿಯಲ್ಲಿ ಭಾರತ ಕ್ರಾಂತಿ ಮಾಡಿದೆ ಎಂದು ದೇಶದ ಪ್ರಗತಿಯನ್ನು ಶ್ಲಾಘಿಸಿದ್ದಾರೆ. 2022 ರಲ್ಲಿ ಯುಪಿಐ ಮೂಲಕ 126 ಲಕ್ಷ ಕೋಟಿ ರೂ ಮೌಲ್ಯದ ಸುಮಾರು 7,400 ಕೋಟಿ ಡಿಜಿಟಲ್ ಪಾವತಿಗಳನ್ನು ಮಾಡಲಾಗಿದೆ ಎಂದು ತಿಳಿಸಿದರು.