ಬೆಂಗಳೂರು: ‘ನಾ ನಾಯಕಿ’ ಸಮಾವೇಶದಲ್ಲಿ 1 ಲಕ್ಷಕ್ಕೂ ಹೆಚ್ಚು ಮಹಿಳೆಯರನ್ನು ಸೇರಿಸಿ ಮುಂದಿನ ಚುನಾವಣೆಯಲ್ಲಿ ಮಹಿಳೆಯರಿಗೆ ಅತಿ ಹೆಚ್ಚು ಟಿಕೆಟ್ ನೀಡಬೇಕು ಎಂದು ಮನವಿ ಮಾಡಲಾಗುವುದು ಎಂದು ಮಾಜಿ ಸಚಿವೆ ಉಮಾಶ್ರೀ ಹೇಳಿದ್ದಾರೆ.
ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕೆಪಿಸಿಸಿ ವತಿಯಿಂದ ಜ.16ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ಏರ್ಪಡಿಸಿರುವ ಸಮಾವೇಶ ಪ್ರಿಯಾಂಕಾ ಗಾಂಧಿ ಉದ್ಘಾಟಿಸಲಿದ್ದಾರೆ. ರಾಜ್ಯದ ಮೂಲೆ ಮೂಲೆಯಿಂದ ಮಹಿಳೆಯರು, ಬೆಂಗಳೂರಿನ ಸುತ್ತ ಮುತ್ತಲಿನ ಜಿಲ್ಲೆಗಳಿಂದ ಮಹಿಳಾ ನಾಯಕಿಯರು, ಪದಾಧಿಕಾರಿಗಳು ಆಗಮಿಸಲಿದ್ದಾರೆ. ಈವರೆಗೆ ಪಕ್ಷದಲ್ಲಿ ಟಿಕೆಟ್‌ಗಾಗಿ 74 ಕ್ಷೇತ್ರಗಳಿಂದ 109 ಮಂದಿ ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ. ಗೆಲುವಿನ ಮಾನದಂಡ ಆಧರಿಸಿ ಹೆಚ್ಚು ಮಂದಿಗೆ ಅವಕಾಶ ಮಾಡಿಕೊಡಬೇಕು ಎಂದು ಕೇಳುತ್ತೇವೆ ಎಂದರು.
ಇನ್ನು ‘ನಾ ನಾಯಕಿ’ ಕಾರ್ಯಕ್ರಮ ಯಶಸ್ಸಿಗಾಗಿ ಎಲ್ಲ ಪಂಚಾಯ್ತಿ, ವಾರ್ಡ್ ಮಟ್ಟದ ನಾಯಕಿಯರು ಹಾಗೂ ಸಕ್ರಿಯ ಕಾರ್ಯಕರ್ತರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು. ಕನಿಷ್ಠ 1 ಲಕ್ಷ ಮಂದಿ ಮಹಿಳೆಯರು ಸೇರುವಂತೆ ಕಾರ್ಯಕ್ರಮ ಮಾಡಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.