ವಿಜಯನಗರ : ಕಾಂಗ್ರೆಸ್‌ನವರು ಒಟ್ಟು 135 ಜನ ಶಾಸಕರಿದ್ದಾರೆ. ಐದು ಗ್ಯಾರಂಟಿ ಕೊಟ್ಟಿರುವ ಕಾಂಗ್ರೆಸ್‌ಗೆ ಆಪರೇಷನ್ ಮಾಡುವ ಅವಶ್ಯಕತೆ ಏನಿದೆ?. ಲೋಕಸಭಾ ಚುನಾವಣೆ ಬಳಿಕ ಕೇವಲ ನಾಲ್ಕು ತಿಂಗಳು ಕಳೆಯಲಿ, ಗೋವಾ ಹಾಗೂ ಮಹಾರಾಷ್ಟ್ರದಲ್ಲಿ ಏನಾಯ್ತು ಎಂಬುವುದನ್ನು ನೆನಪಿಸಿಕೊಳ್ಳಿ. ಕಾಂಗ್ರೆಸ್ ನವರು ಆಪರೇಷನ್ ಮಾಡೋದು ಬೇಡ ,ಕಾಂಗ್ರೆಸ್ ಸರ್ಕಾರದ್ದು ನ್ಯಾಚುರಲ್ ಡೆಲಿವರಿ ಆಗುತ್ತದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿಂದು ಆಪರೇಷನ್ ಹಸ್ತದ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಬೇರೆ ರಾಜ್ಯಗಳಲ್ಲಿ ಆದ ರೀತಿ ಮುಂದೆ ಈ ರಾಜ್ಯದಲ್ಲಿಯೂ ಆಗಬಹುದು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಇದನ್ನೂ ಓದಿ : ಮಂಡ್ಯ, ತುಮಕೂರು ಸೀಟ್ ಇದ್ಯಾವುದೂ ಚರ್ಚೆನೇ ಆಗಿಲ್ಲ; ಹೆಚ್‌ಡಿಕೆ
ಕಾಂಗ್ರೆಸ್‌ವರಿಗೆ ಸರ್ಕಾರದ ಬಗ್ಗೆ ಸುರಕ್ಷತೆ ಇಲ್ಲ ,ಒಂದು ಕಡೆ ಕಾಂಗ್ರೆಸ್ ಮುಖಂಡ ಬಿಕೆ ಹರಿಪ್ರಸಾದ್, ಆಳಂದ ಶಾಸಕ ಬಿ.ಆರ್ ಪಾಟೀಲ ನೇರವಾಗಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದಾರೆ, ಈ ಅಸಮಾಧಾನ ಮರೆಮಾಚಲು ಬಿಜೆಪಿಯ ಸಾಕಷ್ಟು ಜನ ಕಾಂಗ್ರೆಸ್ ಗೆ ಬರ್ತಾರೆ ಅಂತ ಸುದ್ದಿ ಹಬ್ಬಿಸಿದ್ದಾರೆ ಎಂದು ಲೇವಡಿ ಮಾಡಿದರು.
ಬಿಜೆಪಿ ಪಾಳಯದಲ್ಲಿ ಆತ್ಮಸ್ಥೈರ್ಯ ಕುಂದಿಸುವ ಕೆಲಸವನ್ನು ಕಾಂಗ್ರೆಸ್ ನವರು ಮಾಡುತ್ತಿದ್ದಾರೆ. ಅವರ ಪಕ್ಷದಿಂದ ಬಿಜೆಪಿಗೆ ಬಂದವರಿಗೆ ಬ್ಲಾಕ್ ಮೇಲ್ ಮಾಡುವ ಕೆಲಸ ನಡೆಯುತ್ತಿದೆ. ಯಾರೂ ಕರೆಯದೆ ಇದ್ದರೂ ಅಕ್ಕ ಕರಿದಿದ್ದಾರೆ, ತಂಗಿ ಕರೆದಿದ್ದಾರೆ ಎಂದು ಕಾಂಗ್ರೆಸ್ಸಿಗರು ಬಿಜೆಪಿ ಶಾಸಕಿಯರ ಮನೆಗೆ ಹೋಗುತ್ತಿದ್ದಾರೆ ಎಂದು ಪರೋಕ್ಷವಾಗಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭೇಟಿಯ ಬಗ್ಗೆ ಯತ್ನಾಳ್ ಟೀಕಿಸಿದರು.
ಕೈ ಹಿಡಿಯುತ್ತಾರಾ? ಬಿಜೆಪಿಯ ಮಾಜಿ ಶಾಸಕಿ..
ರಾಜ್ಯ ರಾಜಕಾರಣದಲ್ಲಿ ಪಕ್ಷಾಂತರದ ಸದ್ದು ಜೋರಾಗಿ ಕೇಳಿ ಬರುತ್ತಿರುವ ನಡುವೆಯೇ ಇದೀಗ ಬಿಜೆಪಿಯ ಮಾಜಿ ಶಾಸಕಿಯೊಬ್ಬರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ವಿಚಾರ ಬಲಗೊಂಡಿದೆ.
ಹಿರಿಯೂರು ಕ್ಷೇತ್ರದ ಬಿಜೆಪಿಯ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರ ನಿವಾಸಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಭೇಟಿ ನೀಡಿದ್ದು, ಪೂರ್ಣಿಮಾ ಅವರು ಕಾಂಗ್ರೆಸ್ ಸೇರುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ.
ಬೆಂಗಳೂರಿನ ಕೆ.ಆರ್.ಪುರದ ದೇವಸಂದ್ರನಲ್ಲಿರುವ ಪೂರ್ಣಿಮಾ ಅವರ ನಿವಾಸದಲ್ಲಿ ಇತ್ತಿಚೆಗೆ ಹಮ್ಮಿಕೊಂಡಿದ್ದ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್ ಭಾಗಿಯಾಗಿದ್ದರು. ಈ ಕಾರ್ಯಕ್ರಮದ ಫೋಟೋಗಳು ವೈರಲ್ ಕೂಡ ಆಗಿದ್ದು, ಪೂರ್ಣಿಮಾ ಅವರು ಕಾಂಗ್ರೆಸ್ ಸೇರುವ ಸುಳಿವು ನೀಡಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು.
ಪೂರ್ಣಿಮಾ ಅವರ ತಂದೆ ದಿವಂಗತ ಕೃಷ್ಣಪ್ಪ ಅವರು ಈ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದರು. ಹಾಗಾಗಿ ಪೂರ್ಣಿಮಾ ಅವರೂ ಕಾಂಗ್ರೆಸ್‌ನತ್ತ ಮುಖ ಮಾಡಲಿದ್ದಾರೆ ಎಂದೂ ಹೇಳಲಾಗುತ್ತಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿದ್ದ ಪೂರ್ಣಿಮಾ ಶ್ರೀನಿವಾಸ್, ನನಗೆ ಕಾಂಗ್ರೆಸ್‌ನಿಂದ ಆಹ್ವಾನ ಇದ್ದೇ ಇದೆ. ಆದರೆ ನಾನು ಬಿಜೆಪಿಯಲ್ಲಿ ನೆಲೆ ಕಂಡಿದ್ದೇನೆ. ಸದ್ಯಕ್ಕೆ ಕಾಂಗ್ರೆಸ್ ಸೇರುವ ನಿರ್ಧಾರ ಇಲ್ಲ. ಹಾಗೇನಾದರೂ ಕಾಂಗ್ರೆಸ್‌ಗೆ ಹೋಗುವುದಾದರೆ ಖಂಡಿತವಾಗಿಯೂ ಬಹಿರಂಗಪಡಿಸುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಾಸಕಿಯಾಗಿದ್ದ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನವು ಕೊನೆಯ ಕ್ಷಣದಲ್ಲಿ ಕೈತಪ್ಪಿತ್ತು. ಇದರಿಂದ ಬೇಸರಗೊಂಡಿರುವ ಪೂರ್ಣಿಮಾ ಅವರು ಕಾಂಗ್ರೆಸ್ ಸೇರುವ ನಿರ್ಧಾರ ಮಾಡಿದ್ದಾರೆ ಎಂದೂ ಹೇಳಲಾಗುತ್ತಿತ್ತು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.