ಬೆಂಗಳೂರು : ಕಾಂಗ್ರೆಸ್ ಅವರು ಇನ್ನೊಬ್ಬರಿಗೆ ಟೀಕೆ ಮಾಡೋದು ಯಶಸ್ಸು ಅಂತ ಅಂದುಕೊಂಡಿದ್ದಾರೆ. ಆದರೆ ಅದು ಯಾವುದು ಕೈಗೂಡುವುದಿಲ್ಲ. ಕಾಂಗ್ರೆಸ್ ಎಷ್ಟು ಭ್ರಷ್ಟಾಚಾರ ಮಾಡಿದೆ ಅಂತ ಜನರಿಗೆ ಗೊತ್ತಿದೆ ಎಂದು ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಮುಳುಗುವ ಹಡಗಿಗೆ ಕಾಂಗ್ರೆಸ್‌ನವರು ಹೊಸ ಕ್ಯಾಪ್ಟನ್ ನೇಮಿಸಿ ಬದಲಾವಣೆ ಮಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಈ ವಯಸ್ಸಿನಲ್ಲಿ ಇಡೀ ದೇಶ ಸುತ್ತಿ ಹೇಗೆ ಪಕ್ಷ ಕಟ್ತಾರೋ ಗೊತ್ತಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಸಮಾವೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುತ್ತೇವೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.ಕಾಂಗ್ರೆಸ್ ನಾಯಕರು ಏನ್ ಮಾತಾಡ್ತಾರೆ ಅನ್ನೋದು ಮುಖ್ಯ ಅಲ್ಲ. ಜನ ಏನ್ ಮಾತಾಡ್ತಾರೆ ಅನ್ನೋದು ಮುಖ್ಯ. ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಏನೇನು ಮಾಡಿದ್ದಾರೆ ಅಂತ ಜನರಿಗೆ ಗೊತ್ತಿದೆ. ಕಾಂಗ್ರೆಸ್ ಅವ್ರು ನಂಬಿಕೆ ಭರವಸೆ ಕಳೆದುಕೊಂಡಿದ್ದಾರೆ. ಅವರು ಅಧಿಕಾರದಲ್ಲಿ ಇದ್ದಾಗ ಭ್ರಷ್ಟಾಚಾರ ಮಾಡಿದ್ದಾರೆ. ಈಗ ಏನ್ ಮಾತಾಡಿದ್ರು ಜನ ನಂಬುವ ಸ್ಥಿತಿಯಲ್ಲಿ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಇಷ್ಟು ದಿನ ಆ ಕುಟುಂಬವೇ ಎಲ್ಲಾ ಮಾಡ್ತಿತ್ತು. ಪಕ್ಷ ಮುಳುಗೋ ಸಮಯದಲ್ಲಿ ಖರ್ಗೆಗೆ ಅಧಿಕಾರ ಕೊಟ್ಟಿದ್ದಾರೆ. ಖರ್ಗೆ ಅವರ ಮೇಲೆ ನನಗೆ ಅಪಾರ ಗೌರವ ಇದೆ. ಆದ್ರೆ ಈ ವಯಸ್ಸಿನಲ್ಲಿ ಇಡೀ ದೇಶ ಸುತ್ತಿ ಹೇಗೆ ಪಕ್ಷ ಕಟ್ತಾರೋ ಗೊತ್ತಿಲ್ಲ. ಕಾಂಗ್ರೆಸ್‍ಗೆ ದೇಶ, ರಾಜ್ಯದಲ್ಲಿ ಭವಿಷ್ಯ ಇಲ್ಲ ಎಂದು ಟೀಕಿಸಿದ್ದಾರೆ.