Friday, September 29, 2023
spot_img
- Advertisement -spot_img

ಚಂದ್ರಯಾನ ಯಶಸ್ವಿ ಬೆನ್ನಲ್ಲೇ ಟಿವಿಯಲ್ಲಿ ಕಾಣಿಸಿಕೊಂಡ ಮೋದಿ : ಕಾಂಗ್ರೆಸ್ ಕಿಡಿ

ಬೆಂಗಳೂರು : ಚಂದ್ರಯಾನ-3ರ ವಿಕ್ರಂ ಲ್ಯಾಂಡರ್ ಯಶಸ್ಸಿಯಾಗಿ ಚಂದ್ರನ ಮೇಲೆ ಇಳಿದ ಸಂದರ್ಭ ಪದೇ ಪದೇ ಟಿವಿಯಲ್ಲಿ ಕಾಣಿಸಿಕೊಂಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಭಾರೀ ಟೀಕೆ ವ್ಯಕ್ತವಾಗಿದೆ.

ಕಾಂಗ್ರೆಸ್ ಸೇರಿದಂತೆ ಬಿಜೆಪಿ ವಿರೋಧಿ ಬಣದ ವಿವಿಧ ಪಕ್ಷಗಳು ಮೋದಿ ವಿರುದ್ಧ ಕಿಡಿಕಾರಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಪರ ವಿರೋಧ ಚರ್ಚೆಗಳು ಜೋರಾಗಿಯೇ ನಡೆಯುತ್ತಿವೆ.

ಐತಿಹಾಸಿಕ ಸಾಧನೆಗೆ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿರುವ ಕಾಂಗ್ರೆಸ್ ನಾಯಕ ಕೆ.ಸಿ ವೇಣುಗೋಪಾಲ್, ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದು, ‘ಚಂದ್ರಯಾನ ಯಶಸ್ವಿ ಲ್ಯಾಂಡಿಂಗ್ ಬಳಿಕ ನೀವು ತಕ್ಷಣ ಸ್ಕ್ರೀನ್ ಮೇಲೆ ಬಂದು ಕ್ರೆಡಿಟ್ ತೆಗೆದುಕೊಂಡಿದ್ದೀರಿ. ಆದರೆ, ವಿಜ್ಞಾನಿಗಳು ಮತ್ತು ಇಸ್ರೋವನ್ನು ಬೆಂಬಲಿಸುವಲ್ಲಿ ನಿಮ್ಮ ಸರ್ಕಾರ ಏಕೆ ವಿಫಲವಾಗಿದೆ’? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : ಸಮೀಕ್ಷೆಯಲ್ಲಿ ‘ಕಮಲ’ ಕಮಾಲ್; ಈಗ ಚುನಾವಣೆ ನಡೆದ್ರೆ ಮೋದಿ ಮತ್ತೆ ಅಧಿಕಾರಕ್ಕೆ!

ಚಂದ್ರಯಾನ-3ರಲ್ಲಿ ಕೆಲಸ ಮಾಡಿದ ಹೆವಿ ಇಂಜಿನಿಯರಿಂಗ್ ಕಾರ್ಪೊರೇಷನ್ (ಹೆಚ್‌ಇಸಿ) ನ ತಂತ್ರಜ್ಞರಿಗೆ ಕಳೆದ 17 ತಿಂಗಳಿನಿಂದ ಸಂಬಳ ಏಕೆ ದೊರೆತಿಲ್ಲ? ಎಂದು ವೇಣುಗೋಪಾಲ್ ಕೇಳಿದ್ದಾರೆ.

‘ಬಾಹ್ಯಾಕಾಶ ಯೋಜನೆಗಳ ಬಜೆಟ್‌ ಅನ್ನು ಮೋದಿ ಸರ್ಕಾರ ಶೇ.32ರಷ್ಟು ಕಡಿತಗೊಳಿಸಿದೆ. ಆದರೂ, ಆ ಹೀರೋಗಳು ವಿಶ್ವದರ್ಜೆಯ ಬಾಹ್ಯಾಕಾಶ ಸಂಶೋಧನಾ ಕಾರ್ಯಕ್ರಮ ನಡೆಸಿದ್ದಾರೆ. ಮೋದಿ ಅವರಿಗೆ ವಿಜ್ಞಾನಿಗಳ ಪ್ರತಿಭೆ ಹಾಗೂ ಪರಿಶ್ರಮದ ಬಗ್ಗೆ ಗೌರವವೇ ಇಲ್ಲ. ವಿಜ್ಞಾನಿಗಳ ಸಾಧನೆ ವೇಳೆ ಪ್ರಚಾರ ಪಡೆದುಕೊಂಡಿದ್ದಾರೆ’ ಎಂದು ವೇಣುಗೋಪಾಲ್ ಟ್ವೀಟ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ತಿರುಗೇಟು :

ಆಗಸ್ಟ್ 23ರಂದು ಚಂದ್ರಯಾನ ಯಶಸ್ವಿಯಾದ ಬೆನ್ನಲ್ಲೇ ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಗೆ ತಿರುಗೇಟು ನೀಡಿತ್ತು. ಬಿಜೆಪಿ ಪಾಳಯ ಚಂದ್ರಯಾನ ಕೇಂದ್ರದ ಬಿಜೆಪಿ ಸರ್ಕಾರ ಮತ್ತು ಪ್ರಧಾನಿ ಮೋದಿಯವರ ಸಾಧನೆ ಎಂಬಂತೆ ಬಿಂಬಿಸಿದರೆ, ಅತ್ತ ಕಾಂಗ್ರೆಸ್ ಇಸ್ರೋಗೆ ಅಡಿಪಾಯ ಹಾಕಿದ್ದೇ ನೆಹರು ಎಂದು ಹೇಳಿತ್ತು. ಇಸ್ರೋದ ಇಂದಿನ ಸಾಧನೆಗೆ ನೆಹರು ಮತ್ತು ಇಂದಿರಾ ಗಾಂಧಿಯವರ ದೂರದೃಷ್ಟಿ ಮತ್ತು ಪ್ರೋತ್ಸಾಹವೇ ಕಾರಣ ಎಂದಿತ್ತು.

ಅತ್ತ ಚಂದ್ರಯಾನ ಸಕ್ಸಸ್, ಇತ್ತ ಟಿವಿಯಲ್ಲಿ ಬಂದ ಮೋದಿ :

ಆಗಸ್ಟ್ 23ರಂದು ಸಂಜೆ ಚಂದ್ರಯಾನ ಯಶಸ್ವಿ ಲ್ಯಾಂಡಿಗ್ ಆದ ತಕ್ಷಣ ಪ್ರಧಾನಿ ಮೋದಿ ಟಿವಿಯಲ್ಲಿ ಕಾಣಿಸಿಕೊಂಡಿದ್ದರು. ಬ್ರಿಕ್ಸ್ ಶೃಂಗ ಸಭೆಯ ಪ್ರಯುಕ್ತ ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್ ನಲ್ಲಿದ್ದ ಪ್ರಧಾನಿ, ಅಲ್ಲಿಂದಲೇ ಇಸ್ರೋ ವಿಜ್ಞಾನಿಗಳು ಮತ್ತು ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ್ದರು.

ಪ್ರಧಾನಿ ಸ್ಕ್ರೀನ್ ಮೇಲೆ ಕಾಣಿಸಿಕೊಂಡಿದ್ದುಏಕೆ? : ಚಂದ್ರಯಾನ-3ರ ಯಶಸ್ವಿ ಲ್ಯಾಂಡಿಂಗ್ ಬಳಿಕ ಪ್ರಧಾನಿ ಮೋದಿ ಟಿವಿಯಲ್ಲಿ ಕಾಣಿಸಿಕೊಂಡಿರುವುದರ ಹಿಂದೆ ಹಲವು ಕಾರಣಗಳಿವೆ. ಪ್ರಪ್ರಥಮವಾಗಿ ಮೋದಿ ಪ್ರಧಾನಿಯಾಗಿರುವುದರಿಂದ ಅವರು ದೇಶವನ್ನು ಉದ್ದೇಶಿಸಿ ಮಾತನಾಡುವುದು ಅನಿವಾರ್ಯವಾಗಿದೆ. ಇದರ ಜೊತೆಗೆ ಇಸ್ರೋ ಆಡಳಿತ ವಿಭಾಗದ ಮುಖ್ಯಸ್ಥರು ಕೂಡ ಪ್ರಧಾನಿಯೇ ಆಗಿದ್ದಾರೆ. ಇಸ್ರೋದಲ್ಲಿ ಪ್ರಧಾನಿ ಬಳಿಕ ಸ್ಪೇಸ್ ಕೌನ್ಸಿಲ್ ಇದ್ದು, ಅದರ ಕೆಳಗೆ ಬಾಹ್ಯಾಕಾಶ ಇಲಾಖೆ ಇದೆ. ಈ ಇಲಾಖೆಯ ಅಧೀನದಲ್ಲಿ ಸ್ವಾಯತ್ತ ಸಂಸ್ಥೆಯಾಗಿ ಇಸ್ರೋ ಕಾರ್ಯ ನಿರ್ವಹಿಸುತ್ತಿದೆ. ಇಸ್ರೋದ ಮುಖಸ್ಥರು ಅದರ ಅಧ್ಯಕ್ಷರಾಗಿದ್ದಾರೆ. ಪ್ರಸ್ತುತ ಎಸ್. ಸೋಮನಾಥ್ ಇಸ್ರೋ ಮುಖ್ಯಸ್ಥರಾಗಿದ್ದಾರೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles