ಬೆಂಗಳೂರು: ಕಾಂಗ್ರೆಸ್‌ನವರು ಸತ್ಯ ಹರಿಶ್ಚಂದ್ರರಂತೆ ವರ್ತನೆ ಮಾಡುತ್ತಿದ್ದಾರೆ. ಆದ್ರೆ ಅವರ ಹಿರಿಯ ನಾಯಕರೇ ಜಾಮೀನು ಮೇಲೆ ಹೊರಗಿದ್ದಾರೆ ಎಂಬುದನ್ನು ಮರೆತಿದ್ದಾರೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಅಧಿಕಾರ ಕಳೆದುಕೊಂಡು ಹತಾಶರಾಗಿರುವ ಕಾಂಗ್ರೆಸ್ ನಾಯಕರು ವೈಯಕ್ತಿಕ ಲಾಭಕ್ಕಾಗಿ ಪೇಸಿಎಂ ತಂತ್ರ ರೂಪಿಸಿದ್ದು, ಪೇಸಿಎಂ ಅಭಿಯಾನದ ಮೂಲಕ ಕಾಂಗ್ರೆಸ್ ನಾಯಕರು ರಾಜ್ಯ ರಾಜಕೀಯದ ಘನತೆ ಮಣ್ಣುಪಾಲು ಮಾಡಿದ್ದಾರೆ. ಅಷ್ಟೇ ಅಲ್ಲದೇ ನಟ ಅಖಿಲ್ ಅಯ್ಯರ್ ಎಂಬುವರ ಹೆಸರನ್ನೂ ಕಾಂಗ್ರೆಸ್ ದುರ್ಬಳಕೆ ಮಾಡಿಕೊಂಡಿದ್ದು, ಕಾಂಗ್ರೆಸ್ ಪಕ್ಷದ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ಇನ್ನು ಭ್ರಷ್ಟಾಚಾರದಿಂದಲೇ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ. ಇವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನೆ ಮಾಡಿದ್ದಾರೆ. ಇಡೀ ದೇಶದಲ್ಲಿ ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್ ನಾಯಕರು ಇಂತಹ ಕೀಳುಮಟ್ಟದ ರಾಜಕೀಯ ಮಾಡುವುದರಲ್ಲಿ ನಿಸ್ಸೀಮರೆಂದು ಸಾಬೀತು ಮಾಡುವ ಮೂಲಕ ಮತ್ತೊಮ್ಮೆ ಬೆತ್ತಲಾಗಿದ್ದಾರೆ. ಆದರೆ ಏನೇ ಮಾಡಿದರೂ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುದ್ಧ ಆಡಳಿತ ಜನರಿಗೆ ತಿಳಿದಿದೆ. ಅವರು ಜನಸಾಮಾನ್ಯರ ಸಿಎಂ ಎಂಬುದು ಜನರಿಗೆ ಗೊತ್ತಿದೆ. ಮುಖ್ಯಮಂತ್ರಿ ಒಳ್ಳೆಯ ಆಡಳಿತವನ್ನು ನೀಡುವುದನ್ನು ಕಾಂಗ್ರೆಸ್‌ಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮಾಜಿ ಮುಖ್ಯಮಂತ್ರಿಯೊಬ್ಬರು ಹೋಗಿ ಪೋಸ್ಟರ್ ಅಂಟಿಸುವುದನ್ನು 75 ವರ್ಷಗಳ ಇತಿಹಾಸದಲ್ಲೇ ನೋಡಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ರು.