ನವದೆಹಲಿ : ಸಂಸತ್ತಿನ ಕಾರ್ಯವ್ಯಾಪ್ತಿಯಲ್ಲಿ ಸೋನಿಯಾ ಗಾಂಧಿ ರಾಜಕೀಯಯ ಬೆರೆಸಲು ಹೊರಟಿದ್ದಾರೆ. ಅವರು ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ವಿವಾದಗಳಿಗೆ ಮುನ್ನುಡಿ ಬರೆಯಲು ಯತ್ನಿಸುತ್ತಿದ್ದಾರೆ ಎಂದು ಕೇಂದ್ರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಸರ್ಕಾರ ಕರೆದಿರುವ ವಿಶೇಷ ಅಧಿವೇಶನದ ಕುರಿತು ಪ್ರಧಾನಿ ನರೇಂದ್ರ ಮೋದಿಯವರಿಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಬರೆದಿರುವ ಪತ್ರದ ಬಗ್ಗೆ ಬುಧವಾರ ಮಾತನಾಡಿರುವ ಅವರು, ಸೋನಿಯಾ ಅವರ ಪತ್ರವು ಕೇಂದ್ರದ ರಾಜಕೀಯದಲ್ಲಿ ಹೊಸ ವಿವಾದಗಳನ್ನು ಸೃಷ್ಟಿಸಿದೆ. ಸಂಸತ್ತಿನ ಅಧಿವೇಶನದ ಸಮಯದಲ್ಲಿ ಚರ್ಚೆಗೆ ಮಂಡನೆಯಾಗಬೇಕಿರುವ ಅಂಶಗಳ ಬಗ್ಗೆ ಅವರು ಪತ್ರ ಬರೆದಿದ್ದಾರೆ, ಆದರೆ ಇದು ಬೇಡದ ವಿವಾದಗಳಿಗೆ ಕಾರಣವಾಗಿದೆ ಎಂದು ಕಿಡಿ ಕಾರಿದ್ದಾರೆ.
ಇದನ್ನೂ ಓದಿ : ಸೆ.10ಕ್ಕೆ ಹೆಚ್.ಡಿ.ದೇವೇಗೌಡರ ಸಮ್ಮುಖದಲ್ಲಿ ಜೆಡಿಎಸ್ ಸಭೆ
ಪ್ರಜಾತಂತ್ರ ವ್ಯವಸ್ಥೆಯ ದೇವಾಲಯವಾದ ಸಂಸತ್ತನ್ನು ರಾಜಕೀಯಗೊಳಿಸಲು ಸೋನಿಯಾ ಕಾದು ಕುಳಿತ್ತಿದ್ದಾರೆ. ಎಲ್ಲವೂ ಸರಿ ಇರುವ ಈ ಸಮಯದಲ್ಲಿ ಅನಗತ್ಯ ವಿವಾದಗಳಿಗರ ಆಸ್ಪದ ನೀಡುತ್ತಿರುವುದು ದುರದೃಷ್ಟಕರ!. ಸಂವಿಧಾನದ ಪ್ರಕಾರವೇ ಅಧಿವೇಶನ ನಡೆಯಲಿದೆ ಎಂಬುದನ್ನು ಕಾಂಗ್ರೆಸ್ ಅರ್ಥ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದ್ದಾರೆ.
ಅಲ್ಲದೆ ವಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿದ್ದ ಸಂದರ್ಭದಲ್ಲಿಯೂ ಸಹ ಅವರು ಪತ್ರ ಬರೆದು ಸೂಚಿಸಿದ್ದ ಎಲ್ಲ ವಿಷಯಗಳ ಚರ್ಚೆಯನ್ನು ಆಗ ಮಾಡಲಾಗಿತ್ತು. ಕಾಂಗ್ರೆಸ್ ಪಕ್ಷಕ್ಕೆ ಪ್ರಜಾಸತ್ತಾತ್ಮಕ ವಿಚಾರದಲ್ಲಿ ನಂಬಿಕೆ ಇಲ್ಲ ಎಂಬುದನ್ನು ದೇಶ ನೋಡುತ್ತಿದೆ, ಅಲ್ಲದೆ ಸಂಸದೀಯ ಕಾರ್ಯ ವೈಖರಿಯನ್ನು ಪ್ರಶ್ನಿಸುವುದೇ ಕಾಂಗ್ರೆಸ್‌ನ ಕಾಯಕವಾಗಿದೆ. ದೇಶವನ್ನು ಇಷ್ಟು ವರ್ಷ ಆಳಿದ ಪಕ್ಷಕ್ಕೆ ಈ ನಡೆ ಶೋಭೆ ತರುವುದಿಲ್ಲ ಎಂದು ಟೀಕಿಸಿದ್ದಾರೆ.
ಸಂಸತ್ ಅಧಿವೇಶನ ನಡೆಸುವುದು ಭಾರತ ಸರಕಾರದ ಸಾಂವಿಧಾನಿಕ ಹಕ್ಕು, ಅಧಿವೇಶನದಲ್ಲಿ ಎಲ್ಲಾ ವಿಷಯಗಳ ಕುರಿತು ಚರ್ಚಿಸಲು ನಮ್ಮ ಕೇಂದ್ರ ಸರಕಾರ ಸಿದ್ಧವಿದೆ. ಸಂಸತ್ತಿನ ಘನತೆ ಗೌರವ ಕಾಪಾಡಲು ಎಲ್ಲಾ ವಿಪಕ್ಷಗಳು ಸಹಕಾರ ನೀಡುತ್ತವೆ ಎಂದು ಆಶಿಸುವುದಾಗಿ ತಿಳಿಸಿದ್ದಾರೆ.
ಅವಿಶ್ವಾಸ ನಿಲುವಳಿಯಲ್ಲೆ ಅವರಿಗೆ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಲಾಗಿತ್ತು. ಈಗ ಎಲ್ಲ ರೀತಿಯ ಕಾರ್ಯವಿಧಾನಗಳನ್ನು ಅನುಸರಿಸಿಯೇ ಸೆಪ್ಟೆಂಬರ್ 18ರಂದು ವಿಶೇಷ ಅಧಿವೇಶನ ಕರೆಯಲಾಗಿದೆ. ಈ ಹಿನ್ನೆಲೆಯಲ್ಲಿ ಮುಂಚಿತವಾಗಿ ಯಾವುದೇ ವಿಷಯದ ಬಗ್ಗೆ ಚರ್ಚಿಸಲ್ಲ ಎಂದು ಜೋಶಿ ಹೇಳಿದರು.
ಸೋನಿಯಾ ಗಾಂಧಿ ಪತ್ರದಲ್ಲಿ ಏನಿದೆ..?
ಪ್ರಧಾನಿ ಮೋದಿ ಅವರಿಗೆ ಸೋನಿಯಾ ಗಾಂಧಿ ಅವರು ಬರೆದ ಪತ್ರದಲ್ಲಿ ಒಂಬತ್ತು ವಿಷಯಗಳನ್ನು ಪಟ್ಟಿ ಮಾಡಿದ್ದಾರೆ. ಜೊತೆಗೆ ಮುಂಬರುವ ಅಧಿವೇಶನದಲ್ಲಿ ಅವುಗಳ ಬಗ್ಗೆ ಚರ್ಚೆಗೆ ಸಮಯಾವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ವಿರೋಧ ಪಕ್ಷಗಳಿಗೆ ಮಾಹಿತಿ ನೀಡದೆಯೇ ವಿಶೇಷ ಅಧಿವೇಶನ ಕರೆಯಲಾಗಿದೆ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಪತ್ರದಲ್ಲಿ ಹೇಳಿದ್ದಾರೆ. ಅಧಿವೇಶನದಲ್ಲಿ ವಿರೋಧ ಪಕ್ಷಗಳು ಚರ್ಚೆ ಮಾಡಲು ಬಯಸಿರುವ ವಿಷಯಗಳ ಬಗ್ಗೆಯೂ ಉಲ್ಲೇಖ ಮಾಡಿದ್ದಾರೆ.
ಇದನ್ನೂ ಓದಿ : ಸೆ.10ಕ್ಕೆ ಹೆಚ್.ಡಿ.ದೇವೇಗೌಡರ ಸಮ್ಮುಖದಲ್ಲಿ ಜೆಡಿಎಸ್ ಸಭೆ
ಬೇರೆ ಯಾವುದೇ ರಾಜಕೀಯ ಪಕ್ಷಗಳಿಗೆ ಮಾಹಿತಿ ನೀಡದೆ ವಿಶೇಷ ಅಧಿವೇಶನ ಕರೆಯಲಾಗಿದೆ. ಇದರ ಅಜೆಂಡಾ ಏನು ಎನ್ನುವುದರ ಬಗ್ಗೆ ಯಾರಿಗೂ ಗೊತ್ತಿಲ್ಲ. ಸಾರ್ವಜನಿಕ ಕಾಳಜಿ ಹಾಗೂ ಮಹತ್ವದ ವಿಷಯಗಳನ್ನು ಚರ್ಚೆ ಮಾಡುವ ಅವಕಾಶ ಸಿಗುವುದರಿಂದ ಈ ಅಧಿವೇಶನದಲ್ಲಿ ಭಾಗವಹಿಸಲು ನಾವೂ ತೀರ್ಮಾನಿಸಿದ್ದೇವೆ. ಈ ವಿಷಯಗಳನ್ನು ಪ್ರಸ್ತಾಪಿಸಲು ಸಂಬಂಧಪಟ್ಟ ನಿಮಯಗಳಡಿ ಸಮಯ ಸಿಗಬಹುದು ಎಂದು ಭಾವಿಸಿದ್ದೇನೆ ಎಂದಿದ್ದಾರೆ.
ದೇಶದ ಆರ್ಥಿಕ ಪರಿಸ್ಥಿತಿ, ಬೆಲೆ ಏರಿಕೆ, ನಿರುದ್ಯೋಗ, ಕನಿಷ್ಠ ಬೆಂಬಲ ಬೆಲೆ, ಮಣಿಪುರ ಗಲಭೆ, ಚೀನಾ ಅತಿಕ್ರಮಣ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆಗೆ ಅವಕಾಶ ಸಿಗುವ ನಿರೀಕ್ಷೆ ಇದೆ ಎಂದು ಸೋನಿಯಾ ಗಾಂಧಿ ಪತ್ರದಲ್ಲಿ ತಿಳಿಸಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.