ಬೆಂಗಳೂರು: ಡಾನ್ ಕ್ರಿಕೆಟ್ ಬೆಟ್ಟಿಂಗ್ ನಡೆಸುವವನಿಗೆ ಪ್ರಧಾನಿ ಮೋದಿ ತಲೆ ಬಾಗಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ, ಈ ದೃಶ್ಯ ನೋಡಿದ್ರೆ ಬಿಜೆಪಿಯವರ ಸ್ಥಿತಿ ಗೊತ್ತಾಗುತ್ತೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮಂಡ್ಯಗೆ ಭೇಟಿ ನೀಡಿದ್ದ ವೇಳೆ ರೌಡಿಶೀಟರ್ ಗೆ ಕೈಮುಗಿದು ನಮಸ್ಕರಿಸಿದ್ದು ಈ ಫೋಟೋ ವೈರಲ್ ಆಗಿತ್ತು. ಮೋದಿ ಮಂಡ್ಯ ಹೆಲಿಪ್ಯಾಡ್ ಗೆ ಬಂದಿಳಿದ ವೇಳೆ ಬಿಜೆಪಿ ಮುಖಂಡರು ಸ್ವಾಗತಕೋರಿದ್ದರು.
ಈ ವೇಳೆ ಬಿಜೆಪಿ ಮುಖಂಡರ ಜೊತೆ ರೌಡಿ ಶೀಟರ್ ಫೈಟರ್ ರವಿ ಸಹ ಕಾಣಿಸಿಕೊಂಡಿದ್ದು, ಮೋದಿಗೆ ಕೈ ಮುಗಿದು ಸ್ವಾಗತ ಕೋರಿದ್ದಾರೆ. ಇದಕ್ಕೆ ಮೋದಿ ಸಹ ಫೈಟರ್ ರವಿ ಎದುರು ಕೈ ಮುಗಿದು ನಿಂತಿದ್ದರು. ಫೈಟರ್ ರವಿ ಹಾಗೂ ನರೇಂದ್ರ ಮೋದಿ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, ಜಗತ್ತಿನಲ್ಲಿಯೇ ಬಿಜೆಪಿಯಂತಹ ನಿರ್ಲಜ್ಜ ರಾಜಕೀಯ ಪಕ್ಷ ಬೇರೆ ಇರಲು ಸಾಧ್ಯವೇ ಇಲ್ಲ. ಫೈಟರ್ ರವಿ ಎಂಬ ರೌಡಿ ಶೀಟರ್ ಎದುರು ಕೈಮುಗಿದು ನಿಂತ ನರೇಂದ್ರ ಮೋದಿ ಪ್ರಧಾನಿ ಹುದ್ದೆಗೆ ಕಳಂಕ ತಂದಿದ್ದಾರೆ.
ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದ ಬಿಜೆಪಿ ರೌಡಿಯನ್ನು ಪ್ರಧಾನಿ ಎದುರು ನಿಲ್ಲಿಸಿದ್ದು ನಾಚಿಕೆಗೇಡು ಎಂದು ವಾಗ್ದಾಳಿ ನಡೆಸಿದೆ. ರೌಡಿಶೀಟರ್ಗಳು, ರೇಪಿಸ್ಟ್ ಗಳು ಬಿಜೆಪಿಯ ಮುತ್ತು ರತ್ನಗಳು ಎಂದು ಡಿಕೆಶಿವಕುಮಾರ್ ವ್ಯಂಗ್ಯವಾಡಿದ್ದಾರೆ.