ನವದೆಹಲಿ: ಭಾರತ ಚಂದ್ರನ ಮೇಲೆ ಕಾಲಿಟ್ಟ ಕ್ಷಣಕ್ಕೆ ಇಡೀ ವಿಶ್ವವೇ ಇಸ್ರೋಗೆ ಅಭಿನಂದನೆ ಸಲ್ಲಿಸುತ್ತಿದೆ. ಆದರೆ ಚುನಾವಣಾ ಕಣದಲ್ಲಿ ಈ ಸಾಧನೆ ಪ್ರಚಾರದ ಸರಕಾಗಿ ಮಾರ್ಪಟ್ಟಿದೆ. ಮಧ್ಯಪ್ರದೇಶದಲ್ಲಿ ಚುನಾವಣೆ ಹಿನ್ನೆಲೆ ಚಂದ್ರಯಾನ್ ವಿಚಾರ ಪ್ರಚಾರಕ್ಕೆ ಬಳಕೆಯಾಗಿದೆ.
ಚಂದ್ರಯಾನ್ ಯಶಸ್ಸಿನ ಹಿಂದಿರುವ ವಿಜ್ಞಾನಿಗಳು 17 ತಿಂಗಳಿಂದ ವೇತನ ಪಡೆದಿಲ್ಲ ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಗಂಭೀರ ಆರೋಪ ಮಾಡಿದ್ದಾರೆ. ಚಂದ್ರಯಾನ್ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವ ಮುನ್ನ ಚುನಾವಣಾ ಪ್ರಚಾರದ ವೇಳೆ ಮಾತನಾಡಿರುವ ಅವರು ಈ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ಮೇಯರ್‌ಗೆ ಶೂ ತೆಗೆದು ಒಳಬನ್ನಿ ಎಂದ ವೈದ್ಯ; ಆಸ್ಪತ್ರೆ ಎದುರು ಬುಲ್ಡೋಜರ್ ಪ್ರತ್ಯಕ್ಷ!
‘ಭಾರತದ ಇಸ್ರೋ ವಿಜ್ಞಾನಿಗಳು ಚಂದ್ರಯಾನ್ ಯೋಜನೆ ಯಶಸ್ವಿಯಾಗಿ ಪೂರೈಸಿರುವುದಕ್ಕೆ ನಾವು ಹೆಮ್ಮೆಪಡುತ್ತೇವೆ. ಮಿಷನ್ ಯಶಸ್ವಿಯಾಗಲಿ ಎಂದು ನಾವು ದೇವರಲ್ಲಿ ಪ್ರಾರ್ಥಿಸುತ್ತೇವೆ. ಆದರೆ ಈ ಯಶಸ್ಸಿನ ಹಿಂದಿರುವ ವಿಜ್ಞಾನಿಗಳು ಕಳೆದ 17 ತಿಂಗಳಿಂದ ಸಂಬಳವನ್ನು ಪಡೆದಿಲ್ಲ ಎಂದು ಕೆಲವು ಪತ್ರಿಕೆಗಳು ವರದಿ ಮಾಡಿವೆ’ ಎಂದಿದ್ದಾರೆ.
ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ,’ದೇಶಕ್ಕೆ ಮಾನಹಾನಿ ಮಾಡಲು ದಿಗ್ವಿಜಯ ಯಾವಾಗಲೂ ಈ ರೀತಿಯ ಪ್ರಶ್ನೆಗಳನ್ನು ಎತ್ತುತ್ತಾರೆ. ಅಂಥವರನ್ನು ‘ದೇಶದ್ರೋಹಿಗಳು’ ಎನ್ನುವುದರಲ್ಲಿ ತಪ್ಪೇನಿಲ್ಲ. ಅವರು ಬಾಟ್ಲಾ ಹೌಸ್ ಎನ್‌ಕೌಂಟರ್ ಎಂದು ಕರೆದರು, ಇದರಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಹುತಾತ್ಮರಾಗಿದ್ದರು. ಸುಪ್ರೀಂಕೋರ್ಟ್‌ನಿಂದ ಮರಣದಂಡನೆಗೆ ಗುರಿಯಾದ ಭಯೋತ್ಪಾದಕನ ಮನೆಗೆ ಹೋಗಿದ್ದರು. ದಿಗ್ವಿಜಯ ಅವರು ಸರ್ಜಿಕಲ್ ಸ್ಟ್ರೈಕ್ ಮತ್ತು ಕೋವಿಡ್ ವ್ಯಾಕ್ಸಿನೇಷನ್ ಕುರಿತಂತೆಯೂ ಪ್ರಶ್ನೆ ಎತ್ತಿದ್ದರು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ವಿ.ಡಿ.ಶರ್ಮಾ ಪ್ರತ್ಯುತ್ತರ ನೀಡಿದ್ದಾರೆ.
ಇದನ್ನೂ ಓದಿ: ಚಂದ್ರನ ಫೋಟೋ ಕಂಡು ಗಾಬರಿ ಬಿದ್ದ ಸೇಠ್; ‘ಇದು ಕೋರಮಂಗಲ’ ಎಂದಿದ್ಯಾಕೆ?
ಬಿಜೆಪಿ ನಾಯಕನ ಪ್ರತ್ಯುತ್ತರ ಸಂಬಂಧ ಟ್ವೀಟ್ ಮಾಡಿದ ದಿಗ್ವಿಜಯ್ ಸಿಂಗ್, ‘ಪತ್ರಿಕೆಗಳಲ್ಲಿ ಈ ಕುರಿತಂತೆ ವರದಿಗಳಿವೆ ಎಂದು ನಾನು ಹೇಳಿದೆ. ಒಂದೇ ವ್ಯತ್ಯಾಸವೆಂದರೆ ಚಂದ್ರಯಾನ-3 ಯೋಜನೆಗಾಗಿ ಮೊಬೈಲ್ ಲಾಂಚ್‌ಪ್ಯಾಡ್ ಅನ್ನು ಸಿದ್ಧಪಡಿಸಿದವರು ಇಸ್ರೋ ಅಲ್ಲ ಆದರೆ ಸರ್ಕಾರಿ ಪಿಎಸ್‌ಯು, ಹೆಚ್‌ಇಸಿಯ ಇಂಜಿನಿಯರ್‌ಗಳಾಗಿದ್ದಾರೆ. ಈ ಯಶಸ್ಸಿನಲ್ಲಿ ಅವರ ಪಾತ್ರವೂ ಇದೆ ಎಂದು ನಾನು ನಂಬುತ್ತೇನೆ. ಆದರೆ ಅವರ ಹಕ್ಕುಗಳು ಸಿಗುತ್ತಿಲ್ಲ ಎಂಬುದು ವಿಷಾದದ ಸಂಗತಿ ಎಂದಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.