ಶಿವಮೊಗ್ಗ : ಕೋಟ್ಯಂತರ ರೂಪಾಯಿ ಕಾರ್ಪೋರೇಟ್ ಕಂಪನಿಗಳ ಸಾಲವನ್ನು ಮನ್ನಾ ಮಾಡಲು ಹಿಂದೇಟು ಹಾಕದ ಬಿಜೆಪಿ ಸರ್ಕಾರದವರು ಗ್ರಾಮಗಳ ಅಭಿವೃದ್ಧಿಗಾಗಿ ನೆಡುತೋಪು ಕಟಾವು ಮಾಡಿರುವುದರಲ್ಲಿ ಅಕ್ರಮ ನಡೆದಿದೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಕಿಡಿ ಕಾರಿದ್ದಾರೆ.
ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರಿಮನೆ ಗ್ರಾಮದ ಅಭಿವೃದ್ಧಿಗೆ ಸ್ವತಃ ಶಾಸಕ ಆರಗ ಜ್ಞಾನೇಂದ್ರರವರೆ ಅಡ್ಡಿ ಪಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ತೀರ್ಥಹಳ್ಳಿಯ ಕರಿಮನೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಈ ಹಿಂದೆ ನಿರ್ಮಾಣ ಮಾಡಿದ್ದ ಅಕೇಶಿಯಾ ನೆಡುತೋಪು ಕಡಿದಿರುವ ವಿಷಯದಲ್ಲಿ ಶಾಸಕ ಆರಗ ಜ್ಞಾನೇಂದ್ರ ಅವರು ಅನಗತ್ಯ ವಿವಾದ ಹುಟ್ಟು ಹಾಕುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ : ಪುಟಿನ್ ಭೇಟಿಯಾದ ಕಿಮ್ ಜಾಂಗ್ ಉನ್ : ಪಾಶ್ಚಿಮಾತ್ಯ ದೇಶಗಳಲ್ಲಿ ಹೆಚ್ಚಿದ ಕಳವಳ
ಗ್ರಾಮ ಪಂಚಾಯತಿಯೇ ಅನುದಾನ ನೀಡಿ ಈ ಹಿಂದೆ ಸಸ್ಯವನ ನಿರ್ಮಿಸಿತ್ತು. ಹಲವು ವರ್ಷಗಳ ಕಾಲ ಅದನ್ನು ನಿರ್ವಹಣೆ ಮಾಡಲಾಗಿತ್ತು. ಇದಕ್ಕೆ ಪೂರಕ ದಾಖಲೆಗಳೂ ಇವೆ, ಆದರೆ ಈಗ ಕಡಿತದ ವಿಷಯವನ್ನೆ ವಿವಾದವನ್ನಾಗಿ ಮಾಡಲಾಗಿದೆ. ಗ್ರಾಮದ ಅಭಿವೃದ್ಧಿಗೆ ಹಣ ಸಿಗಬಾರದು, ಇದರಿಂದ ಆಡಳಿತಾರೂಢ ಕಾಂಗ್ರೆಸ್ ಸದಸ್ಯರ ನಡುವೆ ಹಾಗೂ ಗ್ರಾಮಸ್ಥರ ಮಧ್ಯೆ ಅಸಮಾಧಾನ ಮೂಡಬೇಕು ಎನ್ನುವ ಉದ್ದೇಶದಿಂದ ಪ್ರತಿಭಟನೆ ನಡೆಸಿ, ಅಧಿಕಾರಿಗಳ ವಿರುದ್ಧ ಕೇಸು ದಾಖಲಿಸಲು ಒತ್ತಡ ಹೇರುತ್ತಿದ್ದಾರೆ ಎಂದು ಕಿಮ್ಮನೆ ದೂರಿದ್ದಾರೆ.
ಗೃಹ ಸಚಿವರಾಗಿದ್ದ ವೇಳೆ ಸ್ವತಃ ಇವರೇ ಮರಗಳ ಕಡಿಯಲು ಅವಕಾಶ ನೀಡುವಂತೆ ಇಲಾಖೆಗೆ ಪತ್ರ ಬರೆದಿದ್ದರು. ಈಗ ಇದನ್ನು ಅವರೇ ವಿರೋಧಿಸುತ್ತಿರುವುದು ಕೇವಲ ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಎನ್ನುವುದು ಸ್ಪಷ್ಟವಾಗಿದೆ. ಒಂದು ವೇಳೆ ಕೇಸು ದಾಖಲಿಸುವುದಾದರೆ ಶಾಸಕರ ವಿರುದ್ಧವೇ ದಾಖಲು ಮಾಡಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಅವರು, ಸೀರೆ ಹಂಚುವುದು ಅಭಿವೃದ್ಧಿನಾ ಎಂದು ಆರಗ ವಿರುದ್ಧ ಮಾರ್ಮಿಕವಾಗಿ ತಿವಿದಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.