Friday, September 29, 2023
spot_img
- Advertisement -spot_img

‘ಕೆಸಿಆರ್ ರಕ್ಷಣೆಗೆ ನಿಂತಿರುವ ಪ್ರಧಾನಿ ಮೋದಿ’

ಹೈದ್ರಾಬಾದ್ : ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಮೇಲೆ ಹಲವು ಆರೋಪಗಳಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಯಾವುದೇ ಪ್ರಕರಣಗಳನ್ನು ದಾಖಲಿಸದೆ ರಕ್ಷಿಸುತ್ತಿದ್ದಾರೆ. ಬಿಆರ್‌ಎಸ್, ಬಿಜೆಪಿ ಮತ್ತು ಎಐಎಂಐಎಂ ಪಕ್ಷಗಳು ಪರಸ್ಪರ ವಿರೋಧಿಗಳಂತೆ ಕಂಡರೂ ಅವು ಒಗ್ಗಟ್ಟಾಗಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಪಾದಿಸಿದ್ದಾರೆ.

ನಗರದಲ್ಲಿ ಮೂರು ದಿನಗಳ ಕಾಲ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಕೊನೆಯ ದಿನ, ರಂಗಾರೆಡ್ಡಿ ಜಿಲ್ಲೆಯ ತುಕ್ಕುಗುಡಾದಲ್ಲಿ ನಡೆದ ಬೃಹತ್ ‘ವಿಜಯಭೇರಿ’ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ತೆಲಂಗಾಣ ಮುಖ್ಯಮಂತ್ರಿ ಕೆ.ಸಿ. ಚಂದ್ರಶೇಖರ್ ರಾವ್ ಮತ್ತು ಎಐಎಂಐಎ ನಾಯಕರ ವಿರುದ್ಧ ಯಾಕೆ ಯಾವುದೇ ಪ್ರಕರಣಗಳನ್ನು ದಾಖಲಿಸಿಲ್ಲ ಎಂದು ಪ್ರಶ್ನಿಸಿದರು.

ಇದನ್ನೂ ಓದಿ : ನಿಮ್ಮ ʼಪೊಲಿಟಿಕಲ್‌-360ʼಗೆ ಇಂದು ಎರಡನೇ ವರ್ಷದ ಸಂಭ್ರಮ..

ತೆಲಂಗಾಣದಲ್ಲಿ ಕಾಂಗ್ರೆಸ್ ಈ ಮೂರು ಪಕ್ಷಗಳ ವಿರುದ್ಧ ಹೋರಾಡುತ್ತಿದೆ. ಈ ಪಕ್ಷಗಳು ಮೇಲ್ನೋಟಕ್ಕೆ ಭಿನ್ನ ಭಿನ್ನವಾಗಿದ್ದು, ವಿರೋಧಿಗಳಂತೆ ಕಂಡರೂ ಅವೆಲ್ಲ ಒಂದೇ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಟೀಕಿಸಿದರು.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿಪಕ್ಷಗಳ ನಾಯಕರ ಮೇಲೆ ಹಲವಾರು ಪ್ರಕರಣಗಳನ್ನು ದಾಖಲಿಸಿದೆ. ಆದರೆ ತೆಲಂಗಾಣದಲ್ಲಿ ಆ ರೀತಿಯ ಯಾವುದೇ ಬೆಳವಣಿಗೆಗಳು ಕಂಡು ಬರುತ್ತಿಲ್ಲ ಎಂದು ಅವರು ಅಚ್ಚರಿ ವ್ಯಕ್ತಪಡಿಸಿದರು.

ಇಲ್ಲಿನ ಮುಖ್ಯಮಂತ್ರಿ ಕೆ.ಸಿ.ಆರ್ ಅವರು ರಾಜ್ಯವನ್ನು ಭ್ರಷ್ಟಾಚಾರದ ಕೂಪಕ್ಕೆ ತಳ್ಳಿ ಲೂಟಿ ಹೊಡೆದರೂ, ಅವರನ್ನು ರಕ್ಷಿಸುವ ಕೆಲಸ ನಡೆಯುತ್ತಿದೆ. ಕೆಸಿಆರ್ ಹಗರಣಗಳಲ್ಲಿ ಪ್ರಧಾನಿ ಮೋದಿಯವರಿಗೆ ಪಾಲಿದೆ, ಹೀಗಾಗಿ ತನಿಖೆಗೆ ಮುಂದಾಗಿಲ್ಲ ಎಂದು ರಾಹುಲ್ ಗಂಭೀರ ಆರೋಪ ಮಾಡಿದರು.

ಇಡಿ, ಸಿಬಿಐ ಮತ್ತು ಐಟಿ ಈ ಎಲ್ಲ ಇಲಾಖೆಗಳು ವಿಪಕ್ಷ ನಾಯಕರ ವಿರುದ್ಧ ಇವೆ. ತಮ್ಮ ಜನರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ. ನರೇಂದ್ರ ಮೋದಿ ತಮ್ಮ ಜನರ ಮೇಲೆ ದಾಳಿ ಮಾಡುವುದಿಲ್ಲ. ಕಾಳೇಶ್ವರಂ ಯೋಜನೆಯಲ್ಲಿ 1 ಲಕ್ಷ ಕೋಟಿ ರೂಪಾಯಿ ಭ್ರಷ್ಟಾಚಾರ ಮಾಡಿದ್ದಾರೆ, ಧರಣಿ ಪೋರ್ಟಲ್ ಹೆಸರಿನಲ್ಲಿ ರೈತರು ಹಾಗೂ ದಲಿತರ ಭೂಮಿಯನ್ನು ಕಿತ್ತುಕೊಳ್ಳಲಾಗಿದೆ, ರೈತ ಬಂಧು ಯೋಜನೆಯು ಶ್ರೀಮಂತ ಭೂಮಾಲೀಕರಿಗೆ ಮಾತ್ರ ಸಹಾಯ ಮಾಡಿದೆ ಎಂದು ಕಾಂಗ್ರೆಸ್ ನಾಯಕ ಆರೋಪಿಸಿದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles