ಬೆಂಗಳೂರು : ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾಗಿರುವ ‘ಗೃಹಲಕ್ಷ್ಮೀ’ ಯೋಜನೆಗೆ ಚಾಲನೆ ನೀಡಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ರಾಜ್ಯಕ್ಕೆ ಆಗಮಿಸಲಿದ್ದಾರೆ.
ಬೆಳಗ್ಗೆ 8 ಗಂಟೆಗೆ ದೆಹಲಿಯಿಂದ ಹೊರಡಲಿರುವ ಅವರು, ಖಾಸಗಿ ವಿಮಾನದಲ್ಲಿ 10:50ಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ಬಳಿಕ ಅಲ್ಲಿಂದ ವಿಶೇಷ ವಿಮಾನದ ಮೂಲಕ ನೇರವಾಗಿ ಮೈಸೂರನ ಮಂಡಕಳ್ಳಿ ವಿಮಾನ ನಿಲ್ದಾಣ ಬೆಳಗ್ಗೆ 11:40 ಕ್ಕೆ ತಲುಪಲಿದ್ದಾರೆ.
ಇದನ್ನೂ ಓದಿ : ಚಂದ್ರನ ಮೇಲೆ ಗಂಧಕ ಪತ್ತೆ ಮಾಡಿದ ರೋವರ್!
ನಂತರ ಅಲ್ಲಿಂದ ರಸ್ತೆ ಮೂಲಕ ಮಹಾರಾಜ ಕಾಲೇಜ್ ಕಾಲೇಜು ಮೈದಾನ ತಲುಪಲಿದ್ದಾರೆ. ಬಳಿಕ ಮಧ್ಯಾಹ್ನ 12 ಗಂಟೆಗೆ ನಡೆಯಲಿರುವ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಬಟನ್ ಒತ್ತುವ ಮೂಲಕ ಯೋಜನೆಗೆ ಅಧಿಕೃತ ಚಾಲನೆ ನೀಡಲಿರುವ ಅವರು ಬಳಿಕ ದೆಹಲಿಗೆ ವಾಪಸ್ ಆಗಲಿದ್ದಾರೆ.
ಏನಿದು ಗೃಹಲಕ್ಷ್ಮೀ ಈ ಯೋಜನೆ..?
ವಾರ್ಷಿಕವಾಗಿ 35 ಸಾವಿರಕೋಟಿ ಮೊತ್ತದ ಈ ಕಾರ್ಯಕ್ರಮವನ್ನು ರಾಜ್ಯ ಕಾಂಗ್ರೆಸ್ ಸರ್ಕಾರವು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಘೋಷಿಸಿದ್ದ ಪ್ರಮುಖ ಭರವಸೆ ಈ ‘ಗೃಹಲಕ್ಷ್ಮೀ’. ಪ್ರತಿ ಮನೆಯ ಯಜಮಾನಿಗೆ ತಿಂಗಳಿಗೆ ತಲಾ 2,000 ರೂ. ನೀಡುವ ಬೃಹತ್ ಮೊತ್ತದ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ.
ಹೇಗಿರಲಿದೆ ಈ ಯೋಜನೆ..?
ಜನರಿಗೆ ನೀಡಿದ್ದ ಭರವಸೆಯಂತೆ ಇಂದು ಯೋಜನೆಗೆ ಚಾಲನೆ ನೀಡಲು ಸರ್ಕಾರ ಮುಂದಾಗಿದೆ. ಅದರಂತೆ ಬೆಳಗ್ಗೆ 12ಗಂಟೆಗೆ ಸಿಎಂ ಸಿದ್ದರಾಮಯ್ಯ, ರಾಹುಲ್ ಗಾಂಧಿ ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ ಯೋಜನೆ ಲೋಕಾರ್ಪಣೆಯಾಗಲಿದೆ.
ಈ ಕುರಿತು ಮಾಹಿತಿ ನೀಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಆಗಸ್ಟ್ 30ರಂದು ಅಧಿಕೃತವಾಗಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಸಿಗುತ್ತಿದ್ದಂತೆ ಫಲಾನುಭವಿಗಳ ಮೊಬೈಲ್ ನಂಬರ್‌ಗೆ ಬ್ಯಾಂಕಿನಿಂದ ಮಾಹಿತಿ ಬರುತ್ತದೆ. ಅಂದಿನಿಂದಲೇ ಹಣ ವರ್ಗಾವಣೆ ಆಗುತ್ತದೆ. ಸರ್ವರ್ ಸಮಸ್ಯೆ ಇದ್ದರೆ ಒಂದೆರಡು ದಿನದಲ್ಲಿ ಮನೆಯ ಯಜಮಾನಿ ಖಾತೆಗೆ ಹಣ ವರ್ಗಾವಣೆಯಾಗುತ್ತದೆ
ರಾಜ್ಯದ 10 ಸಾವಿರ ಸ್ಥಳಗಳಲ್ಲಿ ಏಕಕಾಲಕ್ಕೆ ‘ಗೃಹಲಕ್ಷ್ಮಿ’ ಯೋಜನೆಗೆ ಚಾಲನೆ ಸಿಗಲಿದೆ. ಜೊತೆಗೆ ನೇರ ಪ್ರಸಾರ ಇರಲಿದೆ. ಗ್ರಾಪಂ, ನಗರಪಾಲಿಕೆ, ನಗರಸಭೆ ಮಟ್ಟದಲ್ಲಿ ಈ ಕಾರ್ಯಕ್ರಮ ಪ್ರಸಾರವಾಗುವ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸೇರುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಪ್ರತಿ ಜಿಲ್ಲೆಯ ಒಂದೆರಡು ಗ್ರಾಪಂಗಳಲ್ಲಿ ಫಲಾನುಭವಿಗಳೊಂದಿಗೆ ಸಂವಾದ ಕೂಡ ನಡೆಸಲಾಗುವುದು. ಪ್ರತಿ ಪಂಚಾಯಿತಿಗೂ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಮುಖ್ಯ ವೇದಿಕೆಗೆ 140 ಅಡಿ ಸ್ಕ್ರೀನ್ ಅಳವಡಿಸಲಾಗಿದೆ ಎಂದು ಹೇಳಿದರು.
ಯೋಜನೆಯ ಉದ್ಘಾಟನೆಗೆ ಯಾವುದೇ ಅಡ್ಡಿ, ಆತಂಕ ಇರಬಾರದು. ತಾಂತ್ರಿಕ ಸಮಸ್ಯೆ ಕಂಡು ಬಾರದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಗ್ರಾಪಂ ಮಟ್ಟದಲ್ಲಿ ಏನೆಲ್ಲಾ ತಯಾರಿಯಾಗಿದೆ ಎಂಬ ಮಾಹಿತಿ ಪಡೆದುಕೊಂಡಿದ್ದೇನೆ ಎಂದು ತಿಳಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.