ಭೋಪಾಲ್: ಪ್ರಧಾನಿ ಮೋದಿ ಧರ್ಮದ ಆಧಾರದ ಮೇಲೆ ಜನರನ್ನ ವಿಭವಿಸುತ್ತಿದ್ದಾರೆ. ಮೋದಿ ಅವರ ಆಡಳಿತದಲ್ಲಿ ದಲಿತರು ದೊಡ್ಡ ಬೆದರಿಕೆ ಎದುರಿಸುತ್ತಿದ್ದಾರೆ. ನೀವು ಸಂವಿಧಾನ ಉಳಿಸಲು ಮೋದಿಯನ್ನು ಕೊಲ್ಲಲು ಸಿದ್ಧರಾಗಬೇಕು. ಕೊಲ್ಲುವುದೆಂದರೆ ಹತ್ಯೆ ಮಾಡುವುದಲ್ಲ. ಅವರನ್ನು ಸೋಲಿಸಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಧ್ಯಪ್ರದೇಶದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಆಗಿರುವ ರಾಜಾ ಪಟೇರಿಯಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸಭೆಯೊಂದರಲ್ಲಿ ಪಟೇರಿಯಾ ಮಾತನಾಡಿದ್ದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಆಕ್ರೋಶಕ್ಕೆ ಕಾರಣವಾಗಿದೆ. ಇದಕ್ಕೆ ಸ್ಪಷ್ಟನೆ ಕೊಟ್ಟ ಪಟೇರಿಯಾ, ನನ್ನ ಅಭಿಪ್ರಾಯವನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾನು ಗಾಂಧಿಯನ್ನು ನಂಬುವ ವ್ಯಕ್ತಿ, ಈ ರೀತಿ ಮಾತನಾಡಲಾರೆ.
ಸಂವಿಧಾನ ಉಳಿಸಲು ಮೋದಿ ಅವರನ್ನು ಸೋಲಿಸಬೇಕು ಅನ್ನೋ ಅರ್ಥದಲ್ಲಿ ಮಾತನಾಡಿದ್ದೇನೆ. ದಲಿತರು, ಆದಿವಾಸಿಗಳನ್ನು ರಕ್ಷಿಸಲು ಹಾಗೂ ನಿರುದ್ಯೋಗ ಸಮಸ್ಯೆಯನ್ನು ತೊಡೆದುಹಾಕಲು ಮೋದಿಯನ್ನು ಸೋಲಿಸುವುದು ಅವಶ್ಯಕ ಎಂದಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನೂ ಕಾಂಗ್ರೆಸ್ ನಾಯಕನ ಹೇಳಿಕೆಯಿಂದ ಬಿಜೆಪಿ ಪಾಳಯ ಕೆಂಡಾಮಂಡಲವಾಗಿದೆ. ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಕೇಸ್ ದಾಖಲಿಸುವಂತೆ ಪನ್ನಾ ಪೊಲೀಸ್ ಠಾಣೆಗೆ ಸೂಚಿಸಿದ್ದಾರೆ.