ಬೆಳಗಾವಿ : ವಿಧಾನಸಭೆಯ 2022ನೇ ಸಾಲಿನ ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೆಳಗಾವಿಯ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ದೇಶಪಾಂಡೆ ಯವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿರುವ ಬಗ್ಗೆ ಘೋಷಿಸಿದರು.
ನಂತರ ಶಾಸಕ ಆರ್.ವಿ.ದೇಶಪಾಂಡೆ ಮಾತನಾಡಿ, ‘ರಾಜಕಾರಣಿಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಹಿಂದೆ ಇದ್ದಂತ ಉತ್ತಮ ಅಭಿಪ್ರಾಯ, ಅಭಿಮಾನ ಈಗಿಲ್ಲ. ಪ್ರತಿಯೊಬ್ಬರೂ ಸ್ನೇಹಜೀವಿಗಳಾಗಿರಬೇಕು, ಯಾರನ್ನೂ ದ್ವೇಷ ಮಾಡಿ ಏನೂ ಸಾಧಿಸುವುದಿಲ್ಲ. ತಮ್ಮ ಸಹಪಾಠಿಗಳು ಯಾರಾದರೂ ಸಚಿವರಾದರೆ, ಮುಖ್ಯಮಂತ್ರಿ ಆದರೆ ಖುಷಿ ಪಡಬೇಕು ಎಂದು ಅಭಿಪ್ರಾಯಪಟ್ಟರು.
ದೇಶಪಾಂಡೆಯವರಿಗೆ ಇಡೀ ಸದನದ ಎಲ್ಲ ಸದಸ್ಯರೂ ಮೇಜು ತಟ್ಟುವ ಮೂಲಕ ಅವರ ಆಯ್ಕೆ ಸ್ವಾಗತಿಸಿದರು. ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸಚಿವ ಮಾಧುಸ್ವಾಮಿ ಸೇರಿದಂತೆ ಹಿರಿಯ ನಾಯಕರನ್ನು ತಮ್ಮ ಪೀಠದ ಬಳಿಗೆ ಆಹ್ವಾನಿಸಿ ಇಡೀ ಸದನದ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ವೇಳೆ ಮಾತನಾಡಿದ ಸ್ಪೀಕರ್ ಕಾಗೇರಿ, ‘ದೇಶಪಾಂಡೆ ಈ ಸದನ ಪ್ರವೇಶಿಸಿದಂದಿನಿಂದಲೂ ಸದನದ ಚೌಕಟ್ಟು ಮೀರದೆ ನಿಯಮಾವಳಿಗೆ ಬದ್ಧವಾಗಿ ನಡೆದುಕೊಂಡು ಬಂದ ಒಬ್ಬ ಮುತ್ಸದ್ಧಿ ನಾಯಕರು. ಸಾರ್ವಜನಿಕ ಜೀವನದ ಜತೆಗೆ ಧಾರ್ಮಿಕ, ಆಧ್ಯಾತ್ಮಿಕ ಕ್ಷೇತ್ರಗಳಲ್ಲೂ ತೊಡಗಿದವರು. ವಿಶೇಷವಾಗಿ ಶಿಕ್ಷಣ ಹಾಗೂ ಕೈಗಾರಿಕಾ ಕ್ಷೇತ್ರಗಳ ಅಭಿವೃದ್ಧಿಗೆ ಉತ್ತಮ ಕೊಡುಗೆ ನೀಡಿದವರು’ ಎಂದು ಶ್ಲಾಘಿಸಿದರು. ಅಂದಹಾಗೇ ಕಳೆದ ವರ್ಷ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮೊದಲ ಪ್ರಶಸ್ತಿ ಪಡೆದಿದ್ದರು. ಈಗ ದೇಶಪಾಂಡೆಯವರು ಪ್ರಶಸ್ತಿಗೆ ಭಾಜನರಾದವರಲ್ಲಿ ಎರಡನೇಯವರಾಗಿದ್ದಾರೆ.