ಮೈಸೂರು : ಶಾಲೆಗಳಿಗೆ ಬಣ್ಣ ಬಳಿಯಲು ಸರ್ಕಾರದ ದುಡ್ಡು ಬಳಸಲಾಗುತ್ತದೆ. ಇದು ಬಿಜೆಪಿಯ ದುಡ್ಡಲ್ಲ, ಜನರ ದುಡ್ಡು ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಿದ್ದರಾಮಯ್ಯ ಮಾತನಾಡಿ, ಜನರು ಕೇಸರಿಕರಣ ಮಾಡಲು ಕೇಳಿದ್ದಾರೆಯೇ? ಇಷ್ಟ ಬಂದಂತೆ ಅಧಿಕಾರ ಮಾಡಲು ಆಗುವುದಿಲ್ಲ. ಹಾಗೆ ಮಾಡುವುದು ಜನ ವಿರೋಧಿ, ಸಂವಿಧಾನ ವಿರೋಧಿ ಕ್ರಮ ಆಗುತ್ತದೆ. ಇವರಿಗೆ ಜನರು ಬಹುಮತ ಕೊಟ್ಟಿಲ್ಲ. ಹಿಂಬಾಗಿಲ ಮೂಲಕ ಅಧಿಕಾರಕ್ಕೆ ಬಂದು ಏನೇನೋ ಮಾಡುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.
ಶಾಲೆಗಳ ಗೋಡೆಗಳಿಗೆ ಕೇಸರಿ ಬಣ್ಣ ಬಳಿಯುವ ಬಿಜೆಪಿ ಸರ್ಕಾರದ ನಿರ್ಧಾರವನ್ನು ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಿರೋಧಿಸಿದ್ದಾರೆ. ನನಗೆ ಬಹಳ ವರ್ಷ ಬದುಕಬೇಕೆಂಬ ಆಸೆಯಿದೆ. ಹೆಚ್ಚು ವರ್ಷ ಬದುಕುಳಿದು, ಜನರ ಸೇವೆ ಮಾಡಬೇಕು ಎಂಬ ಆಸೆಯಿಟ್ಟುಕೊಂಡಿದ್ದೇನೆ. ಈಗ ನನಗೆ 75 ವರ್ಷ. ಡಯಾಬಿಟಿಸ್ನಿಂದ ಆಯಸ್ಸು 10 ವರ್ಷ ಕಡಿಮೆಯಾಗುತ್ತೆ ಎನ್ನುತ್ತಾರೆ. ನಾನು ಎಷ್ಟು ವರ್ಷಗಳ ಕಾಲ ಬದುಕುತ್ತೇನೋ ಗೊತ್ತಿಲ್ಲ. ರೋಗಗಳು ಬಾರದಂತೆ ಎಲ್ಲರೂ ಮುನ್ನೆಚ್ಚರಿಕೆ ವಹಿಸಬೇಕು ಎಂದರು.
ಸಿದ್ದರಾಮಯ್ಯಗೆ ರಾಜಕೀಯ ಪುನರ್ಜನ್ಮ ಕೊಟ್ಟೆ’ ಎಂಬ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಇದೊಂದು ಬಾಲಿಶ ಹೇಳಿಕೆ. ನಾನು 8 ಚುನಾವಣೆ ಗೆಲ್ಲುವಾಗ ಇದೇ ಕುಮಾರಸ್ವಾಮಿ ಎಲ್ಲಿದ್ದರು? ಎಚ್.ಡಿ.ಕುಮಾರಸ್ವಾಮಿ ರಾಜಕೀಯಕ್ಕೆ ಬಂದಿದ್ದು 1996ರಲ್ಲಿ. ನಾನು ಅಷ್ಟೊತ್ತಿಗಾಗಲೇ ಹಲವು ಚುನಾವಣೆಗಳನ್ನು ಗೆದ್ದಿದ್ದೆ. ಎಚ್ಡಿಕೆ ಹೇಳಿಕೆ ಮತದಾರರಿಗೆ ಮಾಡಿದ ಅವಮಾನ ಎಂದು ಅಭಿಪ್ರಾಯಪಟ್ಟರು.