ಬೆಂಗಳೂರು: ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಚುನಾವಣಾ ಪ್ರಚಾರವಾಗಿ ಬಸ್ ಯಾತ್ರೆಯನ್ನು ಮಾಡಲು ಮುಂದಾಗಿದ್ದು, ಇದಕ್ಕಾಗಿ ಕಾಂಗ್ರೆಸ್ ಎರಡು ತಂಡವಾಗಿ ಬಸ್ ಯಾತ್ರೆ ಆರಂಭಿಸಲಿದೆ.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಒಂದು ತಂಡ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಒಂದು ತಂಡ ಬಸ್‌ನಲ್ಲಿ ಯಾತ್ರೆ ಕೈಗೊಂಡು ಪ್ರಚಾರ ಮಾಡಲಿದೆ. ಇನ್ನು ಎರಡು ತಂಡವಾಗಿ ಯಾತ್ರೆ ಮಾಡಲಿರುವ ಇಬ್ಬರೂ ನಾಯಕರು ತಮ್ಮ ತಂಡದೊಳಗೆ ಯಾರು ಇರಬೇಕು ಎಂಬುದನ್ನು ನಿರ್ಧರಿಸಲಿದ್ದಾರೆ.
ಅದರಂತೆ ರಾಜ್ಯದಲ್ಲಿ ಮುಂಬರುವ 2023 ವಿಧಾನಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿರುವ ಕಾಂಗ್ರೆಸ್ ತಿಂಗಳಾಂತ್ಯಕ್ಕೆ 150ಕ್ಕೂ ಅಧಿಕ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ.ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದ ತಂಡದಿಂದ ಜ.3ರಂದು ಮೊದಲನೆಯದಾಗಿ ಬಸ್ ಯಾತ್ರೆ ಆರಂಭವಾಗುವ ಸಾಧ್ಯತೆಯಿದೆ. ಸಿದ್ದರಾಮಯ್ಯ ತಂಡವು ಉತ್ತರ ಕರ್ನಾಟಕ ಭಾಗದಿಂದ ಬಸ್ ಯಾತ್ರೆ ಆರಂಭಿಸಲಿದೆ.
ಬೀದರ್ ನ ಬಸವಕಲ್ಯಾಣದಿಂದ ಬಸ್ ಯಾತ್ರೆ ಆರಂಭಿಸುವ ಬಗ್ಗೆ ಸಿದ್ದರಾಮಯ್ಯ ಅವರು ಹೈಕಮಾಂಡ್ ಮುಂದೆ ಪ್ರಸ್ತಾಪ ಮಾಡಲಿದ್ದಾರೆ. ಇನ್ನು ಡಿ.ಕೆ. ಶಿವಕುಮಾರ್ ನೇತೃತ್ವದ ತಂಡದ ಬಸ್ ಯಾತ್ರೆ ಬಗ್ಗೆ ಪೂರ್ಣ ಪ್ರಮಾಣದ ಮ್ಯಾಪ್ ನಿಗದಿಯಾಗಿಲ್ಲ. ಆದರೆ, ಇಬ್ಬರು ನಾಯಕರ ಯಾತ್ರೆಗೆ ಈಗಾಗಲೇ ಬಸ್ ರೆಡಿಯಾಗಿದೆ.
ಹೈಕಮಾಂಡ್ ತಂಡ ರಚನೆ ಬಳಿಕ ಬಸ್ ಯಾತ್ರೆ ಚುನಾವಣಾ ಪ್ರಚಾರ ಶುರುವಾಗಲಿದೆ.ಡಿಕೆಶಿ ನೇತೃತ್ವದ ತಂಡವು ದಕ್ಷಿಣ ಕರ್ನಾಟಕದ ಕೋಲಾರದ ಕುರುಡುಮಲೈ ಗಣಪತಿ ದೇವಸ್ಥಾನದಿಂದ ಆರಂಭವಾಗುವ ಸಾಧ್ಯತೆಯಿದೆ. ಒಟ್ಟಾರೆ ಇಬ್ಬರೂ ನಾಯಕರ ಪ್ರವಾಸ ತಂಡ ಹಾಗೂ ವೇಳಾಪಟ್ಟಿ ಶೀಘ್ರದಲ್ಲೇ ಬಿಡುಗಡೆ ಆಗಲಿದೆ.