ನವದೆಹಲಿ : ಜುಲೈ 31, 2023ರಂದು ಹರಿಯಾಣದ ನೂಹ್ ನಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಫಿರೋಜ್ಪುರ್ ಜಿರ್ಕಾದ ಕಾಂಗ್ರೆಸ್ ಶಾಸಕ ಮಮ್ಮನ್ ಖಾನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ನೂಹ್ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಪೊಲೀಸರು ದಾಖಲಿಸಿರುವ ಪ್ರಥಮ ಮಾಹಿತಿ ವರದಿ (ಎಫ್ಐಆರ್) ನಲ್ಲಿ ಮಮ್ಮನ್ ಖಾನ್ ಅವರ ಹೆಸರಿದೆ. ಕಳೆದ ವಾರ ಪೊಲೀಸರು ಮಮ್ಮನ್ ಖಾನ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು. ಶುಕ್ರವಾರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಎಫ್‌ಐಆರ್‌ನಲ್ಲಿರುವ 52 ಆರೋಪಿಗಳ ಪೈಕಿ 42 ಮಂದಿಯನ್ನು ಬಂಧಿಸಲಾಗಿದ್ದು, ಒಬ್ಬರು ಜಾಮೀನಿನ ಮೇಲೆ ಇದ್ದಾರೆ.
ಮಮ್ಮನ್ ಖಾನ್ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮಮ್ಮನ್ ಖಾನ್ ವಿರುದ್ಧದ ಆರೋಪಕ್ಕೆ ಸಂಬಂಧಪಟ್ಟಂತೆ ಫೋನ್ ಕರೆ ದಾಖಲೆಗಳು ಮತ್ತು ಇತರ ಸಾಕ್ಷ್ಯಗಳು ಇವೆ ಎಂದು ಹರಿಯಾಣ ಸರ್ಕಾರ ಹರಿಯಾಣ-ಪಂಜಾಬ್ ಹೈಕೋರ್ಟ್ ಗೆ ತಿಳಿಸಿದೆ.
ಇದನ್ನೂ ಓದಿ : ನೀರು ಹಂಚಿಕೆ ಆದೇಶ ಮರುಪರಿಶೀಲನೆ ಕೋರಿ ಸಿಎಂ ಬರೆದಿದ್ದ ಪತ್ರ ಕೇಂದ್ರ ಸಚಿವರಿಗೆ ಹಸ್ತಾಂತರ
ಹಿಂಸಾಚಾರ ನಡೆದ ನಾನು ನೂಹ್ ನಲ್ಲಿ ಇರಲಿಲ್ಲ. ನನ್ನ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ. ಹಾಗಾಗಿ ಬಂಧನದಿಂದ ರಕ್ಷಣೆ ನೀಡುವಂತೆ ಮಮ್ಮನ್ ಖಾನ್ ಮಂಗಳವಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಎಫ್‌ಐಆರ್‌ನಲ್ಲಿ ಹೆಸರಿರುವುದು ಈಗಷ್ಟೇ ಗೊತ್ತಾಗಿದೆ ಎಂದು ಶಾಸಕರ ಪರ ವಕೀಲರು ಹೇಳಿದ್ದರು. ಆದರೆ, ಗುರುವಾರ ಮಮ್ಮನ್ ಖಾನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಹರಿಯಾಣ-ಪಂಜಾಬ್ ಹೈಕೋರ್ಟ್ ನ್ಯಾಯಮೂರ್ತಿ ವಿಕಾಸ್ ಬಹ್ಲ್ ಅಕ್ಟೋಬರ್ 19 ರಂದು ಪ್ರಕರಣದ ವಿಚಾರಣೆ ನಡೆಸಲಿದ್ದಾರೆ.
ಜುಲೈ 31 ರಂದು ವಿಶ್ವ ಹಿಂದೂ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಮೆರವಣಿಗೆ ವೇಳೆ ನೂಹ್‌ನಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಘಟನೆಯಲ್ಲಿ ಆರು ಜನರು ಸಾವನ್ನಪ್ಪಿದ್ದರು. ಗುರುಗ್ರಾಮ್‌ನ ಮಸೀದಿಯೊಂದರ ಮೇಲೆ ನಡೆದ ದಾಳಿಯಲ್ಲಿ ಓರ್ವ ಧರ್ಮಗುರು ಬಲಿಯಾಗಿದ್ದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.